ಡಾ. ಕೆ. ತಂಗರಾಜ್ ಮತ್ತು ಪ್ರೊ. ಎಂ. ಎಸ್. ಮುಶ್ತಾಕ್ ಅವರ ನೇತೃತ್ವದಲ್ಲಿ ನಡೆದ ಅಧ್ಯಯನದಲ್ಲಿ 295 ಕೊಂಕಣಿ ಭಾಷಿಕರ ಮೈಟೊಕಾಂಡ್ರಿಯಲ್ ಡಿಎನ್‌ಎಯನ್ನು ವಿಶ್ಲೇಷಿಸಲಾಗಿದೆ. ಮಾತೃವಂಶದ ಮೂಲಕ ಸಾಗಿಬರುವ ಆನುವಂಶಿಕ ಮಾಹಿತಿಯನ್ನು ಆಧರಿಸಿ ನಡೆಸಿದ ಈ ಸಂಶೋಧನೆಯು ಕೊಂಕಣಿ ಸಮುದಾಯಗಳ ಆನುವಂಶಿಕತೆಯಲ್ಲಿನ ವೈವಿಧ್ಯತೆಯನ್ನು ಗುರುತಿಸಿದೆ.
ಅಧ್ಯಯನದ ಪ್ರಕಾರ, ಕೊಂಕಣಿ ಸಮುದಾಯಗಳ ಮಾತೃವಂಶದ ಆನುವಂಶಿಕತೆಯಲ್ಲಿ ದಕ್ಷಿಣ ಏಷ್ಯಾದ ಮೂಲದ ವಂಶಾವಳಿಗಳು ಪ್ರಮುಖವಾಗಿವೆ. ಆದರೆ, ಸಾರಸ್ವತ ಗುಂಪುಗಳಲ್ಲಿ ಸಾರಸ್ವತೇತರ ಗುಂಪುಗಳಿಗೆ ಹೋಲಿಸಿದರೆ ಪಶ್ಚಿಮ ಯುರೇಷಿಯನ್ ಮತ್ತು ಸ್ಟೆಪ್ಪಿ ಸಂಬಂಧಿತ ವಂಶಾವಳಿಗಳ ಸಾಮೀಪ್ಯ ಸ್ವಲ್ಪ ಹೆಚ್ಚಾಗಿದೆ. ಇದು ಪ್ರಾಚೀನ ವಲಸೆಗಳು ಕೇವಲ ಪುರುಷರ ಮೂಲಕವೇ ನಡೆದಿರಲಿಲ್ಲ; ಮಹಿಳೆಯರ ಕೊಡುಗೆಯೂ ಇದ್ದಿರಬಹುದು ಎಂಬುದಕ್ಕೆ ಸೂಚನೆ ನೀಡುತ್ತದೆ.
ಯುರೇಷಿಯಾದ 5,000ಕ್ಕೂ ಹೆಚ್ಚು ಆನುವಂಶಿಕ ಮಾದರಿಗಳೊಂದಿಗೆ ಹೋಲಿಕೆ ನಡೆಸಿದ ಸಂಶೋಧಕರು, ಕೊಂಕಣಿ ಸಮುದಾಯಗಳ ಮಾತೃವಂಶವು ಪ್ರಾಚೀನ ದಕ್ಷಿಣ ಏಷ್ಯಾ ಮತ್ತು ಪಶ್ಚಿಮ ಯುರೇಷಿಯನ್ ಮೂಲಗಳಿಂದ ರೂಪುಗೊಂಡಿದೆ ಎಂದು ತಿಳಿಸಿದ್ದಾರೆ. ಖಾರ್ವಿ ಮತ್ತು ಕುಡುಬಿ ಸಮುದಾಯಗಳಲ್ಲಿ ಐತಿಹಾಸಿಕ ಸಂಸ್ಥಾಪಕ ಘಟನೆಗಳು ಹಾಗೂ ದೀರ್ಘಕಾಲದ ಅಂತರ್ವಿವಾಹ ಪದ್ಧತಿಯ ಪ್ರಭಾವವೂ ಕಂಡುಬಂದಿದೆ. ಗೌಡ ಸಾರಸ್ವತ ಬ್ರಾಹ್ಮಣರು ಮತ್ತು ರೋಮನ್ ಕ್ಯಾಥೋಲಿಕ್ ಸಮುದಾಯಗಳಲ್ಲಿ ಹೆಚ್ಚಿನ ಆನುವಂಶಿಕ ವೈವಿಧ್ಯತೆ ಗುರುತಿಸಲಾಗಿದೆ.
ಅಧ್ಯಯನದ ಪ್ರಮುಖ ಲೇಖಕ ಡಾ. ಜೈಸನ್ ಸಿಕ್ವೇರಾ, ಕೊಂಕಣಿ ಸಮುದಾಯಗಳ ಆನುವಂಶಿಕತೆಯು ಭೌಗೋಳಿಕ ಪರಿಸರ, ಹವಾಮಾನ, ಸಂಸ್ಕೃತಿ ಮತ್ತು ಸಾವಿರಾರು ವರ್ಷಗಳ ಜನಸಂಚಾರದಿಂದ ರೂಪುಗೊಂಡಿದೆ ಎಂದು ಹೇಳಿದ್ದಾರೆ. ಪ್ರೊ. ಮುಶ್ತಾಕ್ ಅವರು, ಹಿಮಯುಗದ ನಂತರದ ಜನಸಂಚಾರ ಮತ್ತು ಹೊಲೊಸೀನ್ ಕಾಲಘಟ್ಟದ ಚಲನೆಗಳು ಈ ಆನುವಂಶಿಕ ವೈವಿಧ್ಯತೆಯ ರೂಪುಗೊಳ್ಳುವಿಕೆಯಲ್ಲಿ ಪಾತ್ರ ವಹಿಸಿರಬಹುದು ಎಂದು ವಿವರಿಸಿದ್ದಾರೆ.
ಸಿಎಸ್‌ಐಆರ್–CCMB ನಿರ್ದೇಶಕ ಡಾ. ವಿನಯ್ ಕುಮಾರ್ ನಂದಿಕೂರಿ ಅವರ ಪ್ರಕಾರ, ಈ ಸಂಶೋಧನೆಯು ಭಾರತದ ಪಶ್ಚಿಮ ಕರಾವಳಿಯ ಜನಾಂಗೀಯ ಮತ್ತು ಭಾಷಿಕ ಇತಿಹಾಸವನ್ನು ಅರ್ಥಮಾಡಿಕೊಳ್ಳಲು ಮಹತ್ವದ ಕೊಡುಗೆ ನೀಡಿದೆ. ಬರ್ನ್ ವಿಶ್ವವಿದ್ಯಾಲಯದ ಪ್ರೊ. ಜಾರ್ಜ್ ವ್ಯಾನ್ ಡ್ರೀಮ್ ಮತ್ತು ಲಕ್ನೋದ ಬಿಎಸ್‌ಐಪಿ (BSIP) ಸಂಸ್ಥೆಯ ಡಾ. ಲೊಮಸ್ ಕುಮಾರ್ ಕೂಡ ಈ ಅಧ್ಯಯನದ ಸಹಲೇಖಕರಾಗಿದ್ದಾರೆ.



