ಕಾಸರಗೋಡು: ಕೇರಳ ರಾಜ್ಯ ಕನ್ನಡ ಭಾಷಾ ಅಲ್ಪಸಂಖ್ಯಾತರ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಂಘಟನೆಯಾದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ), ಕಾಸರಗೋಡು ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಕೇರಳ ರಾಜ್ಯ ಘಟಕದ ಸಹಯೋಗದಲ್ಲಿ ನವೆಂಬರ್ 1ರಂದು ಬೆಳಿಗ್ಗೆ 9 ಗಂಟೆಗೆ ಕಾಸರಗೋಡು ಕನ್ನಡ ಗ್ರಾಮದಲ್ಲಿ ಕಾಸರಗೋಡು ಜಿಲ್ಲಾ ಕನ್ನಡ ರಾಜ್ಯೋತ್ಸವ ಹಾಗೂ ಜಿಲ್ಲಾ ಕನ್ನಡ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ.
ಕಳೆದ 36 ವರ್ಷಗಳಿಂದ ನಿರಂತರವಾಗಿ ನವೆಂಬರ್ 1ರಂದು ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಕನ್ನಡ ದಿನಾಚರಣೆಯ ಅಂಗವಾಗಿ ಜಿಲ್ಲೆಯಾದ್ಯಂತ ಕನ್ನಡಪರ ಸಂಘ-ಸಂಸ್ಥೆಗಳು ಹಾಗೂ ಕನ್ನಡಿಗರು ಸ್ವಯಂಪ್ರೇರಿತರಾಗಿ ಕನ್ನಡ ಪ್ರತಿಜ್ಞೆ ಕೈಗೊಳ್ಳುವಂತೆ ಸಂಘಟಕರು ಮನವಿ ಮಾಡಿದ್ದಾರೆ.
‘ಕನ್ನಡ ನನ್ನ ಭಾಷೆ, ಕನ್ನಡ ಸಂಸ್ಕೃತಿಯ ಬಗ್ಗೆ ನನಗೆ ಅಭಿಮಾನವಿದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸುತ್ತೇನೆ. ಅವುಗಳನ್ನು ಉಳಿಸಿ ಬೆಳೆಸಲು ಸದಾ ಸಿದ್ಧನಿದ್ದೇನೆ. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ’ ಎಂಬ ಪ್ರತಿಜ್ಞೆಯನ್ನು ಸ್ವಯಂಪ್ರೇರಿತರಾಗಿ ಸ್ವೀಕರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕರೆ ನೀಡಲಾಗಿದೆ.
ಕೇರಳ ಸರಕಾರಕ್ಕೆ ಮನವಿ
ಕೇರಳ ಸರಕಾರವು ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ಸಮಗ್ರ ಕನ್ನಡ ಸಾಂಸ್ಕೃತಿಕ ಯೋಜನೆಯನ್ನು ರೂಪಿಸಿ, ಮುಂದಿನ ಬಜೆಟ್ನಲ್ಲಿ ಘೋಷಿಸಬೇಕು ಎಂದು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಮನವಿ ಮಾಡಿದೆ.
ಕಾಸರಗೋಡು ಕನ್ನಡ ಗ್ರಾಮದಲ್ಲಿ ನವೆಂಬರ್ 28 ಮತ್ತು 29ರಂದು ನಡೆಯಲಿರುವ ಕೇರಳ ರಾಜ್ಯ 8ನೇ ಕನ್ನಡ ಸಮ್ಮೇಳನ-2026, ಕೇರಳ-ಕರ್ನಾಟಕ ಉತ್ಸವ ಹಾಗೂ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಉತ್ಸವದ ಸಂದರ್ಭದಲ್ಲಿ ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕೇರಳ-ಕರ್ನಾಟಕ ಭವನಕ್ಕೆ ಶಿಲಾನ್ಯಾಸ ನೆರವೇರಿಸಲು ಉದ್ದೇಶಿಸಲಾಗಿದೆ.
ಈ ಶಿಲಾನ್ಯಾಸ ಸಮಾರಂಭಕ್ಕೆ ಕೇರಳದ ಮುಖ್ಯಮಂತ್ರಿ, ಸಚಿವರು, ಕಾಸರಗೋಡು ಜಿಲ್ಲೆಯ ಎಲ್ಲಾ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ ಎಂದು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ತಿಳಿಸಿದ್ದಾರೆ.



