ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು
ಸಮ್ಮೇಳನದ ಅಂಗವಾಗಿ ಕೇರಳ-ಕರ್ನಾಟಕ ಕನ್ನಡ ರಾಜ್ಯೋತ್ಸವ, ಮಕ್ಕಳ ಸಾಹಿತ್ಯ ಉತ್ಸವ, ಕರಕುಶಲ ವಸ್ತು ಪ್ರದರ್ಶನ, ಚಿತ್ರಕಲಾ ಮೇಳ, ಪುಸ್ತಕ ಮೇಳ, ಆಹಾರ ಮೇಳ ಹಾಗೂ ಕೃಷಿ ಮೇಳಗಳನ್ನು ಆಯೋಜಿಸಲಾಗಿದೆ. ಹೊಸ ಕೃತಿಗಳು ಮತ್ತು ಸ್ಮರಣ ಸಂಚಿಕೆಯ ಬಿಡುಗಡೆ, ಅಂತರರಾಜ್ಯ ಮಟ್ಟದ ಬಹುಭಾಷಾ ಕವಿಗೋಷ್ಠಿ, ಚುಟುಕು ಕವಿಗೋಷ್ಠಿ ಹಾಗೂ ಮಕ್ಕಳ ಕವಿಗೋಷ್ಠಿಗಳು ನಡೆಯಲಿವೆ.
ಗಡಿನಾಡು, ಹೊರನಾಡು ಮತ್ತು ಅನಿವಾಸಿ ಭಾರತೀಯ ಕನ್ನಡಿಗರ ನಡುವಿನ ಭಾಷಾ ಬಾಂಧವ್ಯ ಹಾಗೂ ಕನ್ನಡ ಸಂಘಟನೆಗಳ ಪಾತ್ರದ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ, ರಾಜ್ಯ ಮಟ್ಟದ ಮಾಧ್ಯಮ ಗೋಷ್ಠಿ ಮತ್ತು ಜಾನಪದ ಗೋಷ್ಠಿಯನ್ನೂ ಹಮ್ಮಿಕೊಳ್ಳಲಾಗಿದೆ.
ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ
ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ, ಸಮಾಜಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಕರಾವಳಿ ರತ್ನ ಪ್ರಶಸ್ತಿ, ಕೇರಳ-ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ರಾಷ್ಟ್ರೀಯ ಪ್ರಶಸ್ತಿ ಹಾಗೂ ರಾಜ್ಯ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.
ಕೇರಳ-ಕರ್ನಾಟಕ ಭವನಕ್ಕೆ ಶಿಲಾನ್ಯಾಸ
ಸಮ್ಮೇಳನದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿ ಸುಮಾರು ಆರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕೇರಳ-ಕರ್ನಾಟಕ ಭವನ ಸಾಂಸ್ಕೃತಿಕ ಸಮುಚ್ಚಯದ ಭೂಮಿಪೂಜೆ ಮತ್ತು ಶಿಲಾನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರೊಂದಿಗೆ ಕಾಸರಗೋಡಿನಲ್ಲಿ ನಿರ್ಮಾಣಗೊಂಡಿರುವ ಗೋ-ಕುಟೀರದ ಉದ್ಘಾಟನಾ ಕಾರ್ಯಕ್ರಮವೂ ನಡೆಯಲಿದೆ.
ನಾಡಿನಾದ್ಯಂತ ಕನ್ನಡ ಸಂಘಟನೆಗಳ ಪ್ರತಿನಿಧಿಗಳ ಭಾಗವಹಿಸುವಿಕೆ
ಕಳೆದ 36 ವರ್ಷಗಳಿಂದ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಇತಿಹಾಸ ಪರಂಪರೆಯನ್ನು ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ಕಾರ್ಯದಲ್ಲಿ ತೊಡಗಿರುವ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನವು ಈ ಸಮ್ಮೇಳನದ ಮೂಲಕ ವಿವಿಧ ರಾಜ್ಯಗಳ ಕನ್ನಡಿಗರು, ಸಾಹಿತಿಗಳು, ಲೇಖಕರು, ಕಲಾವಿದರು, ಮಾಧ್ಯಮ ಪ್ರತಿನಿಧಿಗಳು ಹಾಗೂ ಕನ್ನಡಪರ ಸಂಘಟನೆಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಗುರಿ ಹೊಂದಿದೆ.
ಕರ್ನಾಟಕ ಸೇರಿದಂತೆ ಭಾರತದ ವಿವಿಧ ರಾಜ್ಯಗಳಿಂದ 100ಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳ ನಿಯೋಗಗಳ ಮೂಲಕ 500ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಸಮ್ಮೇಳನವು ಗಡಿನಾಡು ಕನ್ನಡಿಗರ ಭಾಷಾ ಹಕ್ಕುಗಳು, ಸಾಂಸ್ಕೃತಿಕ ಗುರುತು ಮತ್ತು ಸಾಹಿತ್ಯಕ ಬೆಳವಣಿಗೆಗೆ ಹೊಸ ವೇದಿಕೆಯಾಗಲಿದೆ ಎಂದು ಸಂಘಟಕರು ಆಶಿಸಿದ್ದಾರೆ.
ಸಮ್ಮೇಳನದ ಉದ್ಘಾಟನೆ, ಸಮಾರೋಪ ಹಾಗೂ ವಿವಿಧ ಗೋಷ್ಠಿಗಳಲ್ಲಿ ಗೌರವಾನ್ವಿತ ಅತಿಥಿಗಳು ಭಾಗವಹಿಸಲಿದ್ದು, ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವಂತೆ ಗಣ್ಯರಿಗೆ ಪ್ರತಿಷ್ಠಾನದ ವತಿಯಿಂದ ಆಹ್ವಾನ ನೀಡಲಾಗಿದೆ.
ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಉಳಿವು, ಬೆಳವಣಿಗೆ ಹಾಗೂ ಮುಂದಿನ ಪೀಳಿಗೆಗೆ ಕನ್ನಡದ ಪರಂಪರೆಯನ್ನು ಪರಿಚಯಿಸುವ ಆಶಯದೊಂದಿಗೆ ಈ ಐತಿಹಾಸಿಕ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ತಿಳಿಸಿದೆ.



