ಮುಂಬೈ: ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಬಹುನಿರೀಕ್ಷಿತ ರೊಮ್ಯಾಂಟಿಕ್ ಡ್ರಾಮಾ ‘ಇಂಜಿ ವೆಲ್ಲಂ’ ಚಿತ್ರಕ್ಕೆ ಬಿಡುಗಡೆ ದಿನಾಂಕ ನಿಗದಿಯಾಗಿದೆ. ವಿಜಯ್ ಸೇತುಪತಿ ಮತ್ತು ಸಾಯಿ ಪಲ್ಲವಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾ 2027ರ ಜನವರಿ 29ರಂದು ವಿಶ್ವದಾದ್ಯಂತ ತೆರೆಕಾಣಲಿದೆ.
ನವೆಂಬರ್ 11ರಂದು ಬುಧವಾರ ಚಿತ್ರದ ನಿರ್ಮಾಪಕರು ಹೊಸ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಈ ವಿಷಯವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಇಂಜಿ ವೆಲ್ಲಂ’ ಚಿತ್ರವು ವಿಜಯ್ ಸೇತುಪತಿ ಮತ್ತು ಸಾಯಿ ಪಲ್ಲವಿ ಮೊದಲ ಬಾರಿಗೆ ಜೊತೆಯಾಗಿ ನಟಿಸುತ್ತಿರುವ ಸಿನಿಮಾವಾಗಿದೆ. ಬಿಡುಗಡೆಯಾಗಿರುವ ಮೋಷನ್ ಪೋಸ್ಟರ್ನಲ್ಲಿ ವಿಜಯ್ ಸೇತುಪತಿ ಮತ್ತು ಸಾಯಿ ಪಲ್ಲವಿ ಇಬ್ಬರು ಪುಟ್ಟ ಹೆಣ್ಣುಮಕ್ಕಳೊಂದಿಗೆ ನಗರದ ಮಧ್ಯೆ ನಿಂತು ನಗುತ್ತಿರುವ ದೃಶ್ಯ ಕಾಣಿಸಿಕೊಂಡಿದೆ.
ಮತ್ತೆ ಪ್ರೇಮಕಥೆಯತ್ತ ಮಣಿರತ್ನಂ
‘ಥಗ್ ಲೈಫ್’ ಚಿತ್ರದ ಬಳಿಕ ಮಣಿರತ್ನಂ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ರೊಮ್ಯಾಂಟಿಕ್ ಡ್ರಾಮಾ ಎಂದು ಹೇಳಲಾಗಿದೆ. ಜನವರಿ 2027ರ ಪೊಂಗಲ್ ಹಬ್ಬದ ಸಂಭ್ರಮದ ಸುಮಾರು ಎರಡು ವಾರಗಳ ಬಳಿಕ ಚಿತ್ರ ಬಿಡುಗಡೆಯಾಗಲಿದೆ.
ವಿಜಯ್ ಸೇತುಪತಿ ಮತ್ತು ಸಾಯಿ ಪಲ್ಲವಿ ಅವರ ಮೊದಲ ಜೋಡಿ ಹಾಗೂ ಮಣಿರತ್ನಂ ಅವರ ನಿರ್ದೇಶನದ ಕಾರಣದಿಂದ ‘ಇಂಜಿ ವೆಲ್ಲಂ’ ಚಿತ್ರದ ಮೇಲೆ ಸಿನಿಪ್ರೇಮಿಗಳ ನಿರೀಕ್ಷೆ ಹೆಚ್ಚಾಗಿದೆ




