ಮಂಗಳೂರು: ತುಳುನಾಡಿನ ಇತಿಹಾಸದಲ್ಲಿ ಆಳುಪರ ಆಡಳಿತದ ಕಾಲಘಟ್ಟದಲ್ಲಿ ದಂಡನಾಯಕರಾಗಿ ಮುಂಚೂಣಿಯಲ್ಲಿದ್ದ ಕೆಲ್ಲ ಪುತ್ತಿಗೆಯ ಕೆಲ್ಲ ವಂಶಸ್ಥರ ಸಾಧನೆಗಳನ್ನು ದಾಖಲಿಸಿರುವುದು ಅತ್ಯಂತ ಮಹತ್ವದ ಕಾರ್ಯವಾಗಿದೆ ಎಂದು ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕರಾಮ ಪೂಜಾರಿ ಅಭಿಪ್ರಾಯಪಟ್ಟರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ಇತಿಹಾಸ ತಜ್ಞ ಡಾ. ಪಿ.ಎನ್. ನರಸಿಂಹಮೂರ್ತಿ ರಚಿಸಿರುವ ‘ಕೆಲ್ಲ ಪುತ್ತಿಗೆಯ ಕೆಲ್ಲರು’ ಇತಿಹಾಸ ಕೃತಿಯನ್ನು ತುಳು ಭವನದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ತುಳುನಾಡು ಎಂದರೆ ಕೇವಲ ಆಚರಣೆ ಮತ್ತು ಆರಾಧನೆಗಳಿಗೆ ಸೀಮಿತವಾದುದಲ್ಲ. ಇಲ್ಲಿನ ಇತಿಹಾಸವನ್ನು ಅಧ್ಯಯನ ಮಾಡಿ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವೂ ಆಗಬೇಕು. ಇನ್ನೂ ಬೆಳಕಿಗೆ ಬಾರದಿರುವ ತುಳುನಾಡಿನ ಇತಿಹಾಸದ ಕುರಿತು ಹೆಚ್ಚಿನ ಸಂಶೋಧನೆ ಮತ್ತು ದಾಖಲೀಕರಣ ನಡೆಯಬೇಕಿದೆ. ಈ ನಿಟ್ಟಿನಲ್ಲಿ ಡಾ. ಪಿ.ಎನ್. ನರಸಿಂಹಮೂರ್ತಿ ಅವರ ಕೊಡುಗೆ ಅನನ್ಯವಾಗಿದೆ ಎಂದರು.
ಕೃತಿಕಾರ ಡಾ. ಪಿ.ಎನ್. ನರಸಿಂಹಮೂರ್ತಿ ಮಾತನಾಡಿ, ನಮ್ಮ ಊರಿನ ಚರಿತ್ರೆಯನ್ನು ಅರಿತುಕೊಳ್ಳುವುದೇ ನಾಡಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ. ‘ಕೆಲ್ಲ ಪುತ್ತಿಗೆಯ ಕೆಲ್ಲರು’ ಕೃತಿ ರಚನೆಗಾಗಿ ಸುಮಾರು 35 ವರ್ಷಗಳ ಕಾಲ ಶಾಸನಗಳ ಅಧ್ಯಯನ ಹಾಗೂ ಕ್ಷೇತ್ರ ಅಧ್ಯಯನ ನಡೆಸಿದ್ದೇನೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ, ತುಳು ಅಕಾಡೆಮಿಯ ಮಾಜಿ ಅಧ್ಯಕ್ಷ ಎ.ಸಿ. ಭಂಡಾರಿ ಹಾಗೂ ಕೃತಿಕಾರ ಡಾ. ಪಿ.ಎನ್. ನರಸಿಂಹಮೂರ್ತಿ ಅವರನ್ನು ಮಾಜಿ ಶಾಸಕ ಜೆ.ಆರ್. ಲೋಬೊ ಸನ್ಮಾನಿಸಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೆಲ್ಲ ವಂಶಸ್ಥರ ಪ್ರತಿನಿಧಿ ಕೆ.ಪಿ. ಜಗದೀಶ ಅಧಿಕಾರಿ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಹಾಗೂ ಉಡಲ್ ತುಳು ಪತ್ರಿಕೆಯ ಸಂಪಾದಕಿ ಜಯಂತಿ ಎಸ್. ಬಂಗೇರ ಉಪಸ್ಥಿತರಿದ್ದರು.
ತುಳು ಅಕಾಡೆಮಿ ಸದಸ್ಯೆ ಅಕ್ಷಯ ಆರ್. ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.




