ಮುಂಬೈ : ನಟ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷಿತ ಯಶಸ್ಸು ಕಾಣದಿರುವ ಬಗ್ಗೆ ನಟಿ ಕಿಯಾರಾ ಅಡ್ವಾಣಿ ಪ್ರತಿಕ್ರಿಯಿಸಿದ್ದಾರೆ. ಚಿತ್ರದ ಬಗ್ಗೆ ವ್ಯಕ್ತವಾದ ಟೀಕೆಗಳು ಹಾಗೂ ಪ್ರೇಕ್ಷಕರ ಪ್ರತಿಕ್ರಿಯೆ ತಮಗೆ ತೀವ್ರ ನೋವುಂಟು ಮಾಡಿತ್ತು ಎಂದು ಅವರು ಹೇಳಿದ್ದಾರೆ.
ತಮ್ಮ ಪತಿ ಹಾಗೂ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ‘ಕಾಫಿ ವಿತ್ ಕರಣ್ ಸೀಸನ್ 9’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಿಯಾರಾ, ಚಿತ್ರದ ಸೋಲು ಮತ್ತು ಅದರ ಸುತ್ತ ಎದ್ದ ವಿವಾದಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.
ನಿರ್ದೇಶಕಿ ಗೀತು ಮೋಹನ್ದಾಸ್ ನಿರ್ದೇಶನದ ‘ಟಾಕ್ಸಿಕ್’ ಚಿತ್ರವು ಬಿಡುಗಡೆಯ ಮುನ್ನವೇ ಭಾರಿ ನಿರೀಕ್ಷೆ ಹುಟ್ಟುಹಾಕಿತ್ತು. ಆದರೆ ಚಿತ್ರದಲ್ಲಿ ಪುರುಷ ಪ್ರಧಾನ ಮನೋಭಾವ ಮತ್ತು ಸ್ತ್ರೀದ್ವೇಷವನ್ನು ವೈಭವೀಕರಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಚಿತ್ರದ ಕೆಲವು ದೃಶ್ಯಗಳ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ಹಾಗೂ ಟ್ರೋಲ್ಗಳು ವ್ಯಕ್ತವಾಗಿದ್ದವು.
ಮೊದಲ ದಿನದ ಪ್ರತಿಕ್ರಿಯೆಯಿಂದ ಆಘಾತ
ಚಿತ್ರತಂಡ ಇಂತಹ ಪ್ರತಿಕ್ರಿಯೆಗಳನ್ನು ನಿರೀಕ್ಷಿಸಿರಲಿಲ್ಲ ಎಂದು ಹೇಳಿರುವ ಕಿಯಾರಾ, ಬಿಡುಗಡೆಯಾದ ಮೊದಲ ದಿನವೇ ಪ್ರೇಕ್ಷಕರಿಂದ ವ್ಯಕ್ತವಾದ ಪ್ರತಿಕ್ರಿಯೆ ತಮಗೆ ಆಘಾತ ತಂದಿತ್ತು ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಚಿತ್ರದ ಸೋಲಿನ ಕುರಿತು ಕೇಳಿದಾಗ, “ಮೊದಲ ದಿನವೇ ಅದು ನನ್ನ ಹೃದಯಕ್ಕೆ ತುಂಬಾ ನೋವುಂಟು ಮಾಡಿತ್ತು” ಎಂದು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.
ಚಿತ್ರದ ಬಗ್ಗೆ ವ್ಯಕ್ತವಾದ ಟೀಕೆಗಳು ಮತ್ತು ಅದರ ಪರಿಣಾಮ ತಮ್ಮ ಮೇಲೆ ಬೀರಿದ ಪ್ರಭಾವದ ಬಗ್ಗೆಯೂ ಅವರು ಮಾತನಾಡಿದ್ದಾರೆ.
ಇದೇ ವೇಳೆ, ಚಿತ್ರದಲ್ಲಿನ ಹಾಟ್ ದೃಶ್ಯಗಳ ಕುರಿತು ಪತಿ ಸಿದ್ಧಾರ್ಥ್ ಮಲ್ಹೋತ್ರಾ ಅವರ ಪ್ರತಿಕ್ರಿಯೆಯ ಬಗ್ಗೆಯೂ ಕಿಯಾರಾ ಪ್ರಸ್ತಾಪಿಸಿರುವುದು ಗಮನ ಸೆಳೆದಿದೆ.



