ಮಂಗಳೂರು: ನಗರದ ಜನರಿಗೆ ವಿಶ್ರಾಂತಿ, ವಾಯುವಿಹಾರ ಹಾಗೂ ಮನರಂಜನೆಗೆ ಅನುಕೂಲವಾಗುವಂತೆ ಮಂಗಳೂರಿನ ಹೃದಯಭಾಗದಲ್ಲಿ ನೂತನ ಸಾರ್ವಜನಿಕ ಉದ್ಯಾನವನ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ವಿಶೇಷ ಆಸಕ್ತಿ ವಹಿಸಿದೆ.
ನಗರ ಪ್ರದೇಶದಲ್ಲಿ ಸಾರ್ವಜನಿಕರಿಗೆ ಉತ್ತಮ ಉದ್ಯಾನವನಗಳ ಅಗತ್ಯವನ್ನು ಮನಗಂಡು, ಮುಡಾ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅವರು ಉದ್ಯಾನವನ ಅಭಿವೃದ್ಧಿಗೆ ಸೂಕ್ತ ಸ್ಥಳ ಗುರುತಿಸುವ ಉದ್ದೇಶದಿಂದ ಮಣ್ಣಗುಡ್ಡೆಯ ಸೇವಕ್ ಗಾರ್ಡನ್ ಹಾಗೂ ಮಹಾಕಾಳಿ ಪಡ್ಪು ಬಳಿಯ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಂಗಳೂರು ನಗರ ಪಾಲಿಕೆ ಆಯುಕ್ತ ರಾಹುಲ್ ರತ್ನಮ್ ಪಾಂಡೆ, ಮುಡಾ ಆಯುಕ್ತ ಮೊಹಮ್ಮದ್ ನಜೀರ್ ಸೇರಿದಂತೆ ನಗರ ಪಾಲಿಕೆ ಹಾಗೂ ಮುಡಾದ ಅಧಿಕಾರಿಗಳು ಉಪಸ್ಥಿತರಿದ್ದರು. ಸಾರ್ವಜನಿಕ ಉದ್ಯಾನವನ ನಿರ್ಮಾಣಕ್ಕೆ ಸೂಕ್ತವಾದ ಸ್ಥಳಗಳ ಲಭ್ಯತೆ ಹಾಗೂ ಅಭಿವೃದ್ಧಿಯ ಸಾಧ್ಯತೆಗಳ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಮಂಗಳೂರಿನ ನಾಗರಿಕರಿಗೆ ಉತ್ತಮ ಸಾರ್ವಜನಿಕ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಉದ್ಯಾನವನಗಳನ್ನು ಅಭಿವೃದ್ಧಿಪಡಿಸುವ ಯೋಜನೆಗೆ ಈ ಸ್ಥಳ ಪರಿಶೀಲನೆ ಮಹತ್ವ ಪಡೆದಿದೆ. ಉದ್ಯಾನವನ ನಿರ್ಮಾಣದಿಂದ ನಗರದ ಜನರಿಗೆ ವಾಯುವಿಹಾರ, ವಿಶ್ರಾಂತಿ ಹಾಗೂ ಕುಟುಂಬ ಸಮೇತ ಸಮಯ ಕಳೆಯಲು ಅನುಕೂಲವಾಗುವ ನಿರೀಕ್ಷೆಯಿದೆ.



