ಕಾಸರಗೋಡು: ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ ಸಮಗ್ರ ಕನ್ನಡ ಸಾಂಸ್ಕೃತಿಕ ಯೋಜನೆ ರೂಪಿಸಿ, ಮುಂದಿನ ಬಜೆಟ್ನಲ್ಲಿ ಘೋಷಿಸುವಂತೆ ಕೇರಳ ಸರಕಾರಕ್ಕೆ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಮನವಿ ಮಾಡಿದೆ.
ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ), ಕಾಸರಗೋಡು ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಕೇರಳ ರಾಜ್ಯ ಘಟಕದ ಸಹಯೋಗದಲ್ಲಿ ನ.1ರಂದು ಕಾಸರಗೋಡು ಕನ್ನಡ ಗ್ರಾಮದಲ್ಲಿ ನಡೆದ 71ನೇ ಕನ್ನಡ ರಾಜ್ಯೋತ್ಸವ ಮತ್ತು ಕಾಸರಗೋಡು ಜಿಲ್ಲಾ ಕನ್ನಡ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಮನವಿ ಮಾಡಲಾಯಿತು.
ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ನಗರಸಭಾ ಕೌನ್ಸಿಲರ್ ಶಾರದಾ ಬಿ. ಕನ್ನಡ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಾಸ ಸಂಕೀರ್ತನಕಾರ ಹಾಗೂ ಹರಿದಾಸ ಜಯಾನಂದ ಕುಮಾರ ಕಾಸರಗೋಡು, ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಕನ್ನಡಪರ ಸಂಘ-ಸಂಸ್ಥೆಗಳ ಸದಸ್ಯರು ಸ್ವಯಂಪ್ರೇರಿತರಾಗಿ ಕನ್ನಡ ಪ್ರತಿಜ್ಞೆ ಕೈಗೊಳ್ಳಬೇಕು ಎಂದು ಕರೆ ನೀಡಿದರು.
ಕಳೆದ 36 ವರ್ಷಗಳಿಂದ ಪ್ರತಿವರ್ಷ ನವೆಂಬರ್ 1ರಂದು ನಿರಂತರವಾಗಿ ಕನ್ನಡ ರಾಜ್ಯೋತ್ಸವ ಮತ್ತು ಜಿಲ್ಲಾ ಕನ್ನಡ ದಿನಾಚರಣೆ ಆಚರಿಸಿಕೊಂಡು ಬರಲಾಗುತ್ತಿದೆ. ಕನ್ನಡ ಸಂಘಟಕ ಹಾಗೂ ಗಾಯಕ ಪಿ. ದಿವಾಕರ ಕಾಸರಗೋಡು ಅವರು ಕನ್ನಡ ಪ್ರತಿಜ್ಞೆ ಬೋಧಿಸಿದರು. ಕೆ.ಎನ್. ವೆಂಕಟರಮಣ ಹೊಳ್ಳ ಮತ್ತು ಬಿ. ಸತೀಶ್ ಕೂಡ್ಲು ಶುಭ ಹಾರೈಸಿದರು.
ಕಾಸರಗೋಡಿನಲ್ಲಿ ಕನ್ನಡ ಭಾಷೆಯ ಅಭಿವೃದ್ಧಿಗಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಕಾರ್ಯಪ್ರವೃತ್ತವಾಗಬೇಕು ಎಂಬ ಬೇಡಿಕೆಯನ್ನೂ ಪ್ರತಿಷ್ಠಾನ ಮುಂದಿಟ್ಟಿದೆ.
ನ.28ರಿಂದ ಕೇರಳ ರಾಜ್ಯ ಕನ್ನಡ ಸಮ್ಮೇಳನ
ಕಾಸರಗೋಡು ಕನ್ನಡ ಗ್ರಾಮದಲ್ಲಿ ನವೆಂಬರ್ 28 ಮತ್ತು 29ರಂದು ಕೇರಳ ರಾಜ್ಯದ 8ನೇ ಕನ್ನಡ ಸಮ್ಮೇಳನ-2026, ಕೇರಳ-ಕರ್ನಾಟಕ ಉತ್ಸವ ಹಾಗೂ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಉತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕೇರಳ-ಕರ್ನಾಟಕ ಭವನಕ್ಕೆ ಶಿಲಾನ್ಯಾಸ ನೆರವೇರಿಸಲು ಉದ್ದೇಶಿಸಲಾಗಿದೆ.
ಸಮ್ಮೇಳನದಲ್ಲಿ ಕೇರಳ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಕನ್ನಡ ಸಂಘ-ಸಂಸ್ಥೆಗಳು ಹಾಗೂ ಶಾಲಾ-ಕಾಲೇಜುಗಳಿಂದ ಸುಮಾರು ಒಂದು ಸಾವಿರ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಕಾರ್ಯಕ್ರಮಕ್ಕೆ ಕೇರಳ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳು, ಸಚಿವರು, ಕಾಸರಗೋಡು ಜಿಲ್ಲೆಯ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ ಎಂದು ಶಿವರಾಮ ಕಾಸರಗೋಡು ತಿಳಿಸಿದ್ದಾರೆ.
ಕುಶಲ ಕುಮಾರ ಕೆ. ಕನ್ನಡ ಗ್ರಾಮ ಕಾರ್ಯಕ್ರಮ ಸಂಯೋಜಿಸಿದರು.



