ಗುಜರಾತ್ : ದೇಶದ ಏಕತೆ ಮತ್ತು ಸಮಗ್ರತೆಯನ್ನು ರೂಪಿಸುವಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪಾತ್ರ ಮಹತ್ವದ್ದಾಗಿದೆ. ಅವರ ದೂರದೃಷ್ಟಿ, ದೃಢಸಂಕಲ್ಪ ಮತ್ತು ರಾಷ್ಟ್ರಸೇವೆಯ ಆದರ್ಶಗಳು ಇಂದಿಗೂ ದೇಶಕ್ಕೆ ಸ್ಫೂರ್ತಿಯಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 151ನೇ ಜನ್ಮದಿನದ ಅಂಗವಾಗಿ ಗುಜರಾತ್ನ ಏಕತಾನಗರದಲ್ಲಿ ಅಕ್ಟೋಬರ್ 31ರಂದು ನಡೆದ ರಾಷ್ಟ್ರೀಯ ಏಕತಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯಾನಂತರ 550ಕ್ಕೂ ಹೆಚ್ಚು ರಾಜಪ್ರಭುತ್ವದ ಸಂಸ್ಥಾನಗಳನ್ನು ಒಗ್ಗೂಡಿಸಿ ಅಖಂಡ ಭಾರತದ ನಿರ್ಮಾಣಕ್ಕೆ ಪಟೇಲ್ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.
ಭಾರತದ ವೈವಿಧ್ಯತೆಯೇ ದೇಶದ ಶಕ್ತಿ. ಈ ವೈವಿಧ್ಯತೆಯನ್ನು ಏಕತೆಯ ಬಲವಾಗಿ ಪರಿವರ್ತಿಸುವ ಮೂಲಕ ಪಟೇಲ್ ದೇಶವನ್ನು ಒಗ್ಗೂಡಿಸಿದರು. ಅವರ ಆದರ್ಶಗಳು ಬಲಿಷ್ಠ, ಸಮರ್ಥ ಮತ್ತು ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ಮಾರ್ಗದರ್ಶನ ನೀಡುತ್ತಿವೆ ಎಂದರು.
2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವ ಸಂಕಲ್ಪದೊಂದಿಗೆ ಪ್ರತಿಯೊಬ್ಬರೂ ಕಾರ್ಯನಿರ್ವಹಿಸಬೇಕು. ದೇಶದ ಏಕತೆ, ಸಮಗ್ರತೆ ಮತ್ತು ಪ್ರಗತಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಮೋದಿ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಏಕತಾ ಪರೇಡ್, ಪೊಲೀಸ್ ಮತ್ತು ಭದ್ರತಾ ಪಡೆಗಳ ಸಾಹಸ ಪ್ರದರ್ಶನ ಹಾಗೂ ದೇಶದ ಪರಂಪರೆ ಬಿಂಬಿಸುವ ಸ್ತಬ್ಧಚಿತ್ರಗಳು ಗಮನ ಸೆಳೆದವು.


