ಉಡುಪಿ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಕೇಂದ್ರ ಸಮಿತಿಯ 2026ನೇ ಸಾಲಿನ ವಿಶುಕುಮಾರ್ ಪ್ರಶಸ್ತಿಗೆ ಜಾನಪದ ವಿದ್ವಾಂಸ, ಸಾಹಿತಿ ಹಾಗೂ ಸಂಶೋಧಕ ಬನ್ನಂಜೆ ಬಾಬು ಅಮೀನ್ ಆಯ್ಕೆಯಾಗಿದ್ದಾರೆ. ಯುವವಾಹಿನಿ ಉಡುಪಿ ಘಟಕದ ಆತಿಥ್ಯದಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ನವೆಂಬರ್ 1ರಂದು ಬೆಳಿಗ್ಗೆ 9.30ಕ್ಕೆ ಉಡುಪಿಯ ಯಕ್ಷಗಾನ ಕಲಾರಂಗದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಡು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಕರಾವಳಿಯಲ್ಲಿ ಜನಿಸಿ ಕನ್ನಡ ಸಾರಸ್ವತ ಲೋಕದಲ್ಲಿ ವಿಶಿಷ್ಟ ಛಾಪು ಮೂಡಿಸಿದ ವಿಶುಕುಮಾರ್ ಅವರು ಕಥೆಗಾರ, ಕಾದಂಬರಿಕಾರ, ನಟ, ನಾಟಕಕಾರ, ಬರಹಗಾರ ಹಾಗೂ ಕನ್ನಡ ಮತ್ತು ತುಳು ಚಲನಚಿತ್ರಗಳ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು. ಸಾಹಿತ್ಯ, ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರಗಳಿಗೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ಯುವವಾಹಿನಿ ಸಂಸ್ಥೆಯು ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿದೆ ಎಂದು ಅವರು ತಿಳಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಪ್ರಶಸ್ತಿ ಪ್ರದಾನ ಮಾಡಲಿದ್ದು, ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕರಾಮ್ ಪೂಜಾರಿ ಅಭಿನಂದನಾ ಭಾಷಣ ಮಾಡಲಿದ್ದಾರೆ. ಸಾಹಿತಿ ಹಾಗೂ ಲೇಖಕ ಬಿಪಿನ್ ಚಂದ್ರ ಪಾಲ್ ಸಮಾರಂಭ ಉದ್ಘಾಟಿಸಲಿದ್ದು, ಅಶೋಕ್ ಕುಮಾರ್ ಪಡ್ಡು ಅಧ್ಯಕ್ಷತೆ ವಹಿಸಲಿದ್ದಾರೆ. ಗೋವಾದ ಬಿಲ್ಲವ ಸಂಘದ ಗೌರವಾಧ್ಯಕ್ಷ ಚಂದ್ರಹಾಸ್ ಅಮೀನ್ ಹಾಗೂ ವಿಶುಕುಮಾರ್ ಅವರ ಪತ್ನಿ ವಿಜಯಲಕ್ಷ್ಮಿ ವಿಶುಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.



