ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 20ನೇ ತಿರುವೈಲು ವಾರ್ಡಿನ ಜನತೆಯ ಬಹುಕಾಲದ ಬೇಡಿಕೆಯಾಗಿದ್ದ ಆಶ್ರಯ ನಗರ, ಸದಾಶಿವನಗರ ಹಾಗೂ ಅಮೃತನಗರದ ಸುಮಾರು ಒಂದು ಕಿಲೋಮೀಟರ್ ಉದ್ದದ ಮುಖ್ಯ ರಸ್ತೆಯ ಅಗಲೀಕರಣ ಮತ್ತು ಕಾಂಕ್ರಿಟೀಕರಣ ಕಾಮಗಾರಿಗೆ ₹3 ಕೋಟಿಗೂ ಅಧಿಕ ಅನುದಾನ ಬಿಡುಗಡೆಯಾಗಿದೆ.
2024-25ನೇ ಸಾಲಿನ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ಈ ಅನುದಾನ ಮಂಜೂರಾಗಿದ್ದು, ಅಭಿವೃದ್ಧಿ ಕಾಮಗಾರಿಯ ಭೂಮಿಪೂಜೆಯನ್ನು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು ಇಂದು ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.
ಈ ರಸ್ತೆ ಅಭಿವೃದ್ಧಿಯಿಂದ ಸ್ಥಳೀಯ ನಿವಾಸಿಗಳ ಸಂಚಾರಕ್ಕೆ ಅನುಕೂಲವಾಗಲಿದ್ದು, ಸುಗಮ ಹಾಗೂ ಸುರಕ್ಷಿತ ರಸ್ತೆ ಸಂಪರ್ಕಕ್ಕೆ ನೆರವಾಗುವ ನಿರೀಕ್ಷೆಯಿದೆ. ಬಹುಕಾಲದಿಂದ ರಸ್ತೆ ಅಭಿವೃದ್ಧಿಯನ್ನು ನಿರೀಕ್ಷಿಸುತ್ತಿದ್ದ ಪ್ರದೇಶದ ನಿವಾಸಿಗಳ ಬೇಡಿಕೆಗೆ ಈ ಯೋಜನೆಯ ಮೂಲಕ ಸ್ಪಂದಿಸಿದಂತಾಗಿದೆ.



