ಮಂಗಳೂರು: ಕೃಷಿ ಭೂಮಿ, ಪಶುಸಂಗೋಪನೆ, ಜಾನಪದ ಕಲೆ ಹಾಗೂ ಗ್ರಾಮೀಣ ಸಂಸ್ಕೃತಿಯ ಕುರಿತು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅರಿವು ಮೂಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೊಳಿಸಿರುವ ‘ಗ್ರಾಮಾನುಭವ’ ಕಾರ್ಯಕ್ರಮದಡಿ ಪಿಎಂಶ್ರೀ ಕೆ.ಎಸ್. ರಾವ್ ನಗರ ಶಾಲೆಯ ವಿದ್ಯಾರ್ಥಿಗಳು ಪುಚ್ಚೆಮೊಗರು ಗ್ರಾಮದ ಸೀಮಂತೂರು ಕೃಷಿ ತೋಟಕ್ಕೆ ಭೇಟಿ ನೀಡಿ ಗ್ರಾಮೀಣ ಬದುಕಿನ ನೈಜ ಅನುಭವ ಪಡೆದುಕೊಂಡರು.
ನಗರದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕೃಷಿ ಮತ್ತು ಗ್ರಾಮೀಣ ಜೀವನದ ಪರಿಚಯ ಮಾಡಿಕೊಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಕಾರ್ಯಕ್ರಮಕ್ಕೆ 10 ಶಾಲೆಗಳು ಆಯ್ಕೆಯಾಗಿದ್ದು, ಸುಮಾರು 1,567 ವಿದ್ಯಾರ್ಥಿಗಳು ಜಿಲ್ಲೆಯ ವಿವಿಧ ಕೃಷಿ ಭೂಮಿಗಳಿಗೆ ಭೇಟಿ ನೀಡಿ ಕೃಷಿ ಚಟುವಟಿಕೆಗಳು ಹಾಗೂ ಗ್ರಾಮೀಣ ಬದುಕಿನ ಕುರಿತು ಪ್ರಾಯೋಗಿಕ ಜ್ಞಾನ ಪಡೆಯಲಿದ್ದಾರೆ.
ಕಾರ್ಯಕ್ರಮದ ಮೊದಲ ಹಂತಕ್ಕೆ ನವೆಂಬರ್ 1ರಂದು ಮಂಗಳೂರಿನ ನೆಹರು ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದ್ದರು. ಎರಡು ಬಸ್ಗಳಲ್ಲಿ ವಿದ್ಯಾರ್ಥಿಗಳು ಗ್ರಾಮಾನುಭವ ಪ್ರವಾಸ ಕೈಗೊಂಡು ಕೃಷಿ ಬದುಕಿನ ವಿವಿಧ ಆಯಾಮಗಳನ್ನು ಕಣ್ಣಾರೆ ಕಂಡು ತಿಳಿದುಕೊಳ್ಳುವ ಅವಕಾಶ ಪಡೆದರು.
ಪಠ್ಯಪುಸ್ತಕದ ಜ್ಞಾನಕ್ಕೆ ಪೂರಕವಾಗಿ ಕೃಷಿ ಭೂಮಿಯಲ್ಲಿನ ನೈಜ ಅನುಭವ ನೀಡುವ ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಕೃಷಿ, ಪರಿಸರ ಸಂರಕ್ಷಣೆ ಹಾಗೂ ಗ್ರಾಮೀಣ ಸಂಸ್ಕೃತಿಯ ಬಗ್ಗೆ ಆಸಕ್ತಿ ಮತ್ತು ಗೌರವ ಬೆಳೆಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ.



