ದೀಪಾವಳಿಯ ಸಂಭ್ರಮ, ಮನದ ಬೆಳಕಿನ ಸಂದೇಶ ಸಾರುವ ಹವಿಗನ್ನಡ ಕವನ
ಹವಿಗನ್ನಡದ ಸೊಗಡಿನಲ್ಲಿ ದೀಪಾವಳಿ ಹಬ್ಬದ ಸಂಭ್ರಮ, ಸಂಪ್ರದಾಯ, ಭಕ್ತಿ ಹಾಗೂ ಮಾನವೀಯ ಮೌಲ್ಯಗಳನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ ಕವಿ ವಿಶ್ವನಾಥ ಕುಲಾಲ್ ಮಿತ್ತೂರು.
ಕತ್ತಲೆಯನ್ನು ದೂರ ಮಾಡಿ ಬೆಳಕನ್ನು ಸ್ವಾಗತಿಸುವ ದೀಪಾವಳಿ, ಕೇವಲ ಮನೆಯ ಅಂಗಳಕ್ಕೆ ಬೆಳಕು ನೀಡುವ ಹಬ್ಬವಲ್ಲ; ಮನಸ್ಸಿನೊಳಗಿನ ಕತ್ತಲೆ, ಕಹಿ ನೆನಪು ಹಾಗೂ ನಕಾರಾತ್ಮಕ ಭಾವನೆಗಳನ್ನು ದೂರಮಾಡಿ ಸಂತೋಷ ಮತ್ತು ಉಲ್ಲಾಸವನ್ನು ತುಂಬುವ ಹಬ್ಬ ಎಂಬ ಸಂದೇಶವನ್ನು ಕವನ ಸಾರುತ್ತದೆ.
ಗೋವಿಗೆ ಪೂಜೆ ಸಲ್ಲಿಸುವ ಸಂಪ್ರದಾಯದಿಂದ ಹಿಡಿದು ಮನೆ-ಮನಗಳಲ್ಲಿ ಪ್ರೀತಿ, ಸಂತೋಷ ಅರಳುವ ಆಶಯದವರೆಗೆ ಕವನದಲ್ಲಿ ಹಬ್ಬದ ವೈಶಿಷ್ಟ್ಯವನ್ನು ಹವಿಗನ್ನಡದ ಆಡುಮಾತಿನ ಸೊಗಡಿನಲ್ಲಿ ಅಭಿವ್ಯಕ್ತಿಸಲಾಗಿದೆ.
ಕವಿ ಪರಿಚಯ
ವಿಶ್ವನಾಥ ಕುಲಾಲ್ ಮಿತ್ತೂರು
ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ಮಿತ್ತೂರಿನ ನಿವಾಸಿ. ಪುತ್ತೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ಇವರು ಕತೆ, ಕವನ ಹಾಗೂ ಹಾಸ್ಯ ಬರಹಗಳ ರಚನೆ ಮತ್ತು ಓದಿನಲ್ಲಿ ಆಸಕ್ತಿ ಹೊಂದಿದ್ದಾರೆ.
ಕನ್ನಡ ಮತ್ತು ತುಳು ಭಾಷೆಯ ಕತೆ, ಕವಿತೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಮಂಗಳೂರು ಆಕಾಶವಾಣಿಯಲ್ಲಿಯೂ ಇವರ ಕತೆ, ಕವಿತೆಗಳು ಪ್ರಸಾರವಾಗಿವೆ. ಕೆಲವು ಕವಿತೆಗಳಿಗೆ ಬಹುಮಾನಗಳೂ ಲಭಿಸಿವೆ. ಇತ್ತೀಚಿನ ದಿನಗಳಲ್ಲಿ ಹವಿಗನ್ನಡದಲ್ಲಿಯೂ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಪ್ರಕಟಿತ ಕೃತಿಗಳು:
* ಪುಟ್ಟನ ಪ್ರಪಂಚ – ಮಕ್ಕಳ ಕವನ ಸಂಕಲನ
* ನಾಲ್ಕಾಣೆ ನಾಣ್ಯ – ಕನ್ನಡ ಕವನ ಸಂಕಲನ
* ರುಪಾಯಿ ನೋಟು – ತುಳು ಕವನ ಸಂಕಲನ
*ಈ ಹಬ್ಬವೇ ಹಾಂಗೆ*
~~~~~~~~~~~~
ಬೆಣಚ್ಚಿ ಹಬ್ಬ ಬೈಂದು ನೋಡು
ಕಸ್ತಲೆಲಿ ಕೂರಡ
ದೀಪ ನೀನೆ ಹೊತ್ಸಿ ಬಿಡು
ಅವರಿವರ ಕಾಯಡ
ಹೆರ ಬಾಗಿಲು ತೆಗದು ಮಡುಗು
ಗೆನದೆಲ್ಲವು ಬರಲಿ
ನಿನ್ನೆ ಮೊನ್ನೆಯ ಕೊಳೆ ಕಸವು
ಅಲ್ಲಲ್ಲಿಯೆ ಸುಡಲಿ
ಪ್ರಣತೆಗಳ ಬೆಣಚಿ ತುಂಬಿರಲಿ
ಮನೆಯ ಹೆರ ಒಳದಿಕ್ಕೆ
ಮನಸಿನೊಳಂಗೂ ಬರಲಿ ಕೊಶಿ
ಹಕ್ಕಿ ಬಂದಹಾಂಗೆ ಬಿಚ್ಚಿ ರೆಕ್ಕೆ
ಮೀಸಿ, ತಿನಿಸಿ, ಪೂಜೆಯ ಮಾಡು
ಕೊಟ್ಟಗೆಯ ಗೋವಿಂಗೆ
ಹರಸದ್ದೆ ಇರದು ಕಾಮಧೇನು
ಬದುಕು ಹೊಳೆವ ಹಾಂಗೆ
ಈ ಹಬ್ಬ, ಸಂಭ್ರಮ ಎಲ್ಲವೂ ಹಾಂಗೆ
ಕಪ್ಪು ಕಸ್ತಲೆ ಎಲ್ಲ ಕಳೆವದು
ಮನಸು ಮನಸುಗಳ ನಡುವೆ
ಕೊಶಿ ಉಲ್ಲಾಸ ಬೆಳವದು
,****




