ಕಾಸರಗೋಡು: ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಭಾವಗೀತೆಗಳ ಗಾಯನ ಹಾಗೂ ಕವಿಗೋಷ್ಠಿ ಒಳಗೊಂಡ ಸಾಹಿತ್ಯೋತ್ಸವವನ್ನು ನವೆಂಬರ್ 8ರಂದು ಕಾಸರಗೋಡು ಕನ್ನಡ ಗ್ರಾಮದಲ್ಲಿ ಆಯೋಜಿಸಲಾಗಿದೆ.
ಅನ್ನಪೂರ್ಣ ಪ್ರಕಾಶನ, ಸಿರಿಗೇರಿ (ಸಿರುಗುಪ್ಪ ತಾಲೂಕು, ಬಳ್ಳಾರಿ ಜಿಲ್ಲೆ) ಇದರ ನೇತೃತ್ವದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ, ಕಾಸರಗೋಡು ಸಹಯೋಗದೊಂದಿಗೆ ಈ ಕಾರ್ಯಕ್ರಮವು ಅಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ.
ಗಡಿನಾಡು ಕಾಸರಗೋಡಿನಲ್ಲಿ ನಡೆಯುವ ಸಾಹಿತ್ಯೋತ್ಸವವನ್ನು ಪತ್ರಕರ್ತ ಮಹಾನುಭಾವಿ ಮಠ ಉದ್ಘಾಟಿಸಲಿದ್ದು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅಧ್ಯಕ್ಷತೆ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಉಪನ್ಯಾಸಕಿ ಪವಿತ್ರಾ ಕಾಮತ್ ಮಂಗಳೂರು, ರಾಧಾಕೃಷ್ಣ ಕೆ. ಉಳಿಯತ್ತಡ್ಕ, ನಗರಸಭಾ ಕೌನ್ಸಿಲರ್ ಶಾರದಾ ಬಿ., ಸುಭಾಷ್ ಪೆರ್ಲ, ವೆಂಕಟ್ ಭಟ್ ಎಡನೀರು, ಜಯಾನಂದ ಕುಮಾರ್, ಕೆ.ಎನ್. ವೆಂಕಟ್ರಮಣ ಹೊಳ್ಳ, ಕೆ. ಗುರುಪ್ರಸಾದ್ ಕೋಟೆಕಣಿ, ಮಾಜಿ ಕೌನ್ಸಿಲರ್ ಶಂಕರ್ ಕೆ. ಹಾಗೂ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಕೆ. ಜಗದೀಶ ಕೂಡ್ಲು ಭಾಗವಹಿಸಲಿದ್ದಾರೆ.
ಕರ್ನಾಟಕದ ಪತ್ರಕರ್ತರಾದ ವೀರಣ್ಣ ಬಳಿಗಾರ, ಶಿವರಾಜ್, ಪ್ರಸನ್ನ ಕುಮಾರ್ (ಬೆಂಗಳೂರು), ಗೋವರ್ಧನ ರೆಡ್ಡಿ (ಬಳ್ಳಾರಿ), ಕಳಕಪ್ಪ ಬಂಡಿ (ಕೊಪ್ಪಳ) ಹಾಗೂ ಲೇಖಕ, ಪ್ರಕಾಶಕ ಸಿರಿಗೇರಿ ಯರಿಸ್ವಾಮಿ ಉಪಸ್ಥಿತರಿರಲಿದ್ದಾರೆ.
ಭಾವಗೀತೆಗಳ ಗಾಯನ ಸಂಭ್ರಮ
ಜಿ.ಎಸ್. ಶಿವರುದ್ರಪ್ಪ ಅವರ ಕವಿತೆಗಳನ್ನು ಆಧರಿಸಿದ ಭಾವಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ವಸಂತ ಬಾರಡ್ಕ, ದಿವಾಕರ ಪಿ., ಕಾವ್ಯ ಕುಶಲಕುಮಾರ, ಗ್ರೀಷ್ಮ ಜಯರಾಮ, ಅಶ್ವಿನಿ ಗುರುಪ್ರಸಾದ್, ಶ್ರೀಕಾಂತ ಕಾಸರಗೋಡು, ಜಿ.ಪಿ. ಮಣಿಯಂಪಾರೆ, ಪವಿತ್ರಾ ಜೆ.ಪಿ. ಮಣಿಯಂಪಾರೆ, ಶ್ರೀ ದುರ್ಗಾ ಮೆಲೋಡಿಸ್ ಮಣಿಯಂಪಾರೆ ಹಾಗೂ ಗುರುರಾಜ್ ಕಾಸರಗೋಡು ಸ್ವರಗಾನ ಸಂಗೀತ ಬಳಗದ ಕಲಾವಿದರು ಪಾಲ್ಗೊಳ್ಳಲಿದ್ದಾರೆ.
ಕವಿಗೋಷ್ಠಿಯಲ್ಲಿ 25ಕ್ಕೂ ಅಧಿಕ ಕವಿಗಳು
ಜನ್ಮಶತಮಾನೋತ್ಸವದ ಅಂಗವಾಗಿ ನಡೆಯುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಮಂಜಣ್ಣ ಸಿರಿಗೇರಿ ವಹಿಸಲಿದ್ದಾರೆ. ದೇವರಾಜ್ ಆಚಾರ್ಯ ಸೂರಂಬೈಲು, ದೀಕ್ಷಾ ಪಾಂಡಿಗಾಯ, ಗ್ರೀಷ್ಮ ಬಳ್ಳ, ಪ್ರಮೀಳಾ ಚುಳ್ಳಿಕಾನ, ಸುಶೀಲಾ ಪದ್ಯಾಣ, ಜೋಷ್ನಾ ಕಡೆಂದೇಲು, ಸುಮನ ಕರಿಂಬಿಲ, ಅವನಿ ವಿಜಯಕಾನ, ತೇಜಸ್ವಿನಿ ಮನೀಶ್ ಪುಚ್ಚೆಕಾಡು, ಸುಂದರ ಭಟ್ಟ ಕಾನ, ಶಶಿಕಲಾ ಟೀಚರ್ ಕುಂಬಳೆ, ಬಾಲಕೃಷ್ಣ ನಾಯ್ಕ ಎಳ್ಕಾನ, ನಿರ್ಮಲಾ ಸೇಸಪ್ಪ ಖಂಡಿಗೆ, ಸುಮಿತ್ರ ಎರ್ಪಕಟ್ಟೆ, ಚಿತ್ರಕಲಾ ದೇವರಾಜ್ ಸೂರಂಬೈಲು, ದರ್ಶೀನ್ ಚಿರಾಲ್ ಡಿ. ಆಚಾರ್ಯ, ನೀತಿಕಾ ಚೌಕಿ, ಮಲ್ಲಿಕಾ ರೆಂಜತಮೂಲೆ, ನಿವೇದಿತ ವಳಮಲೆ ಬದಿಯಡ್ಕ, ಕೃಪೇಶ್ ಕಲ್ಲಕಟ್ಟ, ರಾಧಾಕೃಷ್ಣ ಕುರುಮುಜ್ಜಿ ಹಾಗೂ ಶ್ರುತಿ ಮೀಪುಗುರಿ ಕವಿತೆಗಳನ್ನು ವಾಚಿಸಲಿದ್ದಾರೆ.
ನವೆಂಬರ್ 28 ಮತ್ತು 29ರಂದು ಕಾಸರಗೋಡು ಕನ್ನಡ ಗ್ರಾಮದಲ್ಲಿ ನಡೆಯಲಿರುವ ಕೇರಳ ರಾಜ್ಯ 8ನೇ ಕನ್ನಡ ಸಮ್ಮೇಳನ, ಕೇರಳ-ಕರ್ನಾಟಕ ಉತ್ಸವ ಹಾಗೂ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಉತ್ಸವದಲ್ಲಿ ನಡೆಯುವ ರಾಜ್ಯಮಟ್ಟದ ಕವಿಗೋಷ್ಠಿ ಮತ್ತು ಮಕ್ಕಳ ಕವಿಗೋಷ್ಠಿಯಲ್ಲಿ ಭಾಗವಹಿಸಲು ಈ ಕಾರ್ಯಕ್ರಮದಲ್ಲಿ ಅತ್ಯುತ್ತಮವಾಗಿ ಕವನ ವಾಚಿಸುವವರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ತಿಳಿಸಿದ್ದಾರೆ.




