ಲಂಡನ್ : ಭಾರತದ ಕೇಂದ್ರ ಸರ್ಕಾರ ಹಾಗೂ ಆಡಳಿತಾರೂಢ ಬಿಜೆಪಿಯ ವಿರುದ್ಧ ಹೈದರಾಬಾದ್ನಲ್ಲಿ ನಡೆದ ಭಾರತ್ ಶೃಂಗಸಭೆಯಲ್ಲಿ ಭಾಷಣ ಮಾಡಿದ ಇಟಲಿಯ ರಾಜಕೀಯ ನಾಯಕ ಜಿಯಾಕೊಮೊ ಫಿಲಿಬೆಕ್ ಅವರಿಗೆ ಇದೀಗ ಸ್ವದೇಶದಲ್ಲೇ ಟೀಕೆ ಎದುರಾಗಿದೆ.
ಇಟಲಿಯ ಆಡಳಿತಾರೂಢ ಮೈತ್ರಿಕೂಟದ ಪ್ರಮುಖ ಪಕ್ಷವಾದ ಫೋರ್ಜಾ ಇಟಾಲಿಯಾ (Forza Italia) ಪಕ್ಷದ ರಾಷ್ಟ್ರೀಯ ಉಪ ಕಾರ್ಯದರ್ಶಿ ಡೆಬೊರಾ ಬೆರ್ಗಾಮಿನಿ ಅವರು ಫಿಲಿಬೆಕ್ ಅವರ ಹೇಳಿಕೆಯನ್ನು ಆಕ್ಷೇಪಿಸಿದ್ದಾರೆ. ಸ್ನೇಹಪರ ರಾಷ್ಟ್ರವೊಂದರ ಆಂತರಿಕ ರಾಜಕೀಯ ವಿಚಾರದಲ್ಲಿ ವಿದೇಶಿ ನಾಯಕರು ಹಸ್ತಕ್ಷೇಪ ಮಾಡುವುದು ಸೂಕ್ತವಲ್ಲ ಎಂದು ಅವರು ಹೇಳಿದ್ದಾರೆ.
ನವೆಂಬರ್ 13 ಮತ್ತು 14ರಂದು ಹೈದರಾಬಾದ್ನಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಭಾರತ್ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಯುರೋಪಿಯನ್ ಸೋಷಿಯಲಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಜಿಯಾಕೊಮೊ ಫಿಲಿಬೆಕ್, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಚುನಾವಣಾ ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ವಿರುದ್ಧದ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು.
ಈ ಸಂದರ್ಭದಲ್ಲಿ ‘ವೋಟ್ ಚೋರ್, ಗದ್ದಿ ಛೋಡ್’ (ಮತ ಕದ್ದವರು ಅಧಿಕಾರ ಬಿಟ್ಟು ತೊಲಗಿ) ಎಂಬ ಘೋಷಣೆಯನ್ನೂ ಕೂಗಿದ್ದರು. ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಹೇಳಿದ್ದ ಅವರು, ಪ್ರಜಾಪ್ರಭುತ್ವದ ರಕ್ಷಣೆಗಾಗಿ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಪರವಾಗಿ ನಿಲ್ಲುವಂತೆ ಕರೆ ನೀಡಿದ್ದರು.
ಫಿಲಿಬೆಕ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬೆರ್ಗಾಮಿನಿ, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ಹಾಗೂ ಆರೋಪಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ಆದರೆ, ಅಂತಹ ಆರೋಪಗಳಿಗೆ ಸೂಕ್ತ ಪುರಾವೆಗಳಿರಬೇಕು ಎಂದು ಹೇಳಿದ್ದಾರೆ.
ಭಾರತ ಮತ್ತು ಇಟಲಿ ನಡುವೆ ವಿಶೇಷ ಕಾರ್ಯತಂತ್ರದ ಪಾಲುದಾರಿಕೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಹಕಾರವಿದೆ. ಇಂತಹ ಸ್ನೇಹಪರ ರಾಷ್ಟ್ರದ ಆಂತರಿಕ ರಾಜಕೀಯ ಚರ್ಚೆಯಲ್ಲಿ ಮಧ್ಯಪ್ರವೇಶಿಸುವುದು ಸೂಕ್ತವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸುಮಾರು 97 ಕೋಟಿ ಮತದಾರರನ್ನು ಹೊಂದಿರುವ ಭಾರತಕ್ಕೆ ಪ್ರಜಾಪ್ರಭುತ್ವದ ಪಾಠ ಹೇಳುವ ಅಗತ್ಯ ಯುರೋಪಿಯನ್ನರಿಗಿಲ್ಲ. ಭಾರತದಲ್ಲಿ ರಾಜಕೀಯ ವಿವಾದಗಳು ಹಾಗೂ ಚುನಾವಣಾ ಸಂಬಂಧಿತ ಆಕ್ಷೇಪಣೆಗಳನ್ನು ಅಲ್ಲಿನ ಪ್ರಜಾಪ್ರಭುತ್ವ ಸಂಸ್ಥೆಗಳು ಮತ್ತು ನ್ಯಾಯಾಂಗದ ಮೂಲಕವೇ ಬಗೆಹರಿಸಿಕೊಳ್ಳಬೇಕು ಎಂದು ಬೆರ್ಗಾಮಿನಿ ತಿಳಿಸಿದ್ದಾರೆ.
ಇದೇ ವಿಚಾರವಾಗಿ ತೆಲಂಗಾಣ ಬಿಜೆಪಿ ಅಧ್ಯಕ್ಷ ಎನ್. ರಾಮಚಂದರ್ ರಾವ್ ಅವರು ಫಿಲಿಬೆಕ್ ಅವರ ಭಾಷಣದ ಕುರಿತು ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿಗೆ (FRRO) ದೂರು ಸಲ್ಲಿಸಿದ್ದು, ಅವರ ವೀಸಾ ನಿಯಮಗಳ ಉಲ್ಲಂಘನೆಯಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಭಾರತದ ಚುನಾವಣಾ ಪಟ್ಟಿಗಳಲ್ಲಿ ಅಕ್ರಮಗಳಿವೆ ಎಂಬುದು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ಆರೋಪವಾಗಿದ್ದು, ಬಿಜೆಪಿ ಹಾಗೂ ಚುನಾವಣಾ ಆಯೋಗ ಈ ಆರೋಪಗಳನ್ನು ತಳ್ಳಿಹಾಕಿವೆ.




