ಶ್ರೀನಗರ ; ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಖುದ್ವಾನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಲಷ್ಕರ್-ಎ-ತೊಯ್ಬಾ ಸಂಘಟನೆಗೆ ಸೇರಿದ ಇಬ್ಬರು ಉಗ್ರರು ಹತರಾಗಿದ್ದಾರೆ. ಹತರಾದವರಲ್ಲಿ ಮೊಹಮ್ಮದ್ ಲತೀಫ್ ಅಹ್ಮದ್ ಭಟ್ ಎಂಬಾತನೂ ಸೇರಿದ್ದು, ಈತ ಕಾಶ್ಮೀರ ಕಣಿವೆಯಲ್ಲಿ ಸಕ್ರಿಯವಾಗಿದ್ದ ಏಕೈಕ ಸ್ಥಳೀಯ ಉಗ್ರ ಎಂದು ಪೊಲೀಸರು ಗುರುತಿಸಿದ್ದರು.
ನವೆಂಬರ್ 11ರಂದು ಕುಲ್ಗಾಮ್ನ ಮಿರ್ ಬಜಾರ್ ಸಮೀಪದ ಅಖ್ರಾನ್ ಪ್ರದೇಶದಲ್ಲಿರುವ ಸಿಆರ್ಪಿಎಫ್ ಭದ್ರತಾ ಠಾಣೆಯ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಮೂವರು ಸಿಆರ್ಪಿಎಫ್ ಸಿಬ್ಬಂದಿ ಗಾಯಗೊಂಡಿದ್ದರು. ಘಟನೆಯ ಬಳಿಕ ಉಗ್ರರ ಪತ್ತೆಗಾಗಿ ಭದ್ರತಾ ಪಡೆಗಳು ಐದು ದಿನಗಳಿಂದ ಶೋಧ ಕಾರ್ಯಾಚರಣೆ ನಡೆಸುತ್ತಿದ್ದವು.
ಗುಪ್ತಚರ ಇಲಾಖೆಯಿಂದ ಲಭಿಸಿದ ಮಾಹಿತಿಯ ಆಧಾರದ ಮೇಲೆ ಭಾನುವಾರ ಖುದ್ವಾನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾರ್ಯಾಚರಣೆ ಆರಂಭಿಸಲಾಯಿತು. ಉಗ್ರರು ತಪ್ಪಿಸಿಕೊಳ್ಳದಂತೆ ಎಲ್ಲಾ ಪ್ರವೇಶ ಹಾಗೂ ನಿರ್ಗಮನ ಮಾರ್ಗಗಳನ್ನು ಬಂದ್ ಮಾಡಲಾಗಿತ್ತು. ಭಾರತೀಯ ಸೇನೆ, ಜಮ್ಮು-ಕಾಶ್ಮೀರ ಪೊಲೀಸ್ ಇಲಾಖೆ ಹಾಗೂ ಕೇಂದ್ರ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿದರು.
ಲತೀಫ್ ಭಟ್ ದಕ್ಷಿಣ ಕಾಶ್ಮೀರದಲ್ಲಿ ನಡೆದ ಹಲವು ಉಗ್ರ ದಾಳಿಗಳಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿತ್ತು. ಅನಂತನಾಗ್ನಲ್ಲಿ ಪೊಲೀಸ್ ಕಾನ್ಸ್ಟೆಬಲ್ ಹತ್ಯೆ ಹಾಗೂ ಕುಲ್ಗಾಮ್ನಲ್ಲಿ ವಲಸೆ ಕಾರ್ಮಿಕರ ಹತ್ಯೆ ಪ್ರಕರಣಗಳಲ್ಲಿಯೂ ಆತನ ಹೆಸರು ಕೇಳಿಬಂದಿತ್ತು.
ಸಿಆರ್ಪಿಎಫ್ ಠಾಣೆಯ ಮೇಲಿನ ದಾಳಿಯ ತನಿಖೆಯನ್ನು ಭದ್ರತಾ ಸಂಸ್ಥೆಗಳು ತೀವ್ರಗೊಳಿಸಿದ್ದು, ಉಗ್ರರಿಗೆ ಆಶ್ರಯ ಮತ್ತು ಇತರ ನೆರವು ನೀಡಿದ ಸ್ಥಳೀಯ ಜಾಲದ ಬಗ್ಗೆಯೂ ತನಿಖೆ ಮುಂದುವರಿದಿದೆ.




