ಮಂಗಳೂರು: ಶಿಕ್ಷಣ, ಕ್ರೀಡೆ, ಸಂಸ್ಕೃತಿ ಹಾಗೂ ಸಮಾಜಸೇವಾ ಕ್ಷೇತ್ರಗಳಲ್ಲಿ ವಿಶಿಷ್ಟ ಕೊಡುಗೆ ನೀಡಿರುವ ಡಾ. ಎಂ. ಮೋಹನ ಆಳ್ವ ಅವರ 75ನೇ ಹುಟ್ಟುಹಬ್ಬದ ಅಮೃತ ಮಹೋತ್ಸವವನ್ನು 2027ರ ಫೆಬ್ರವರಿ 13ರಂದು ಮೂಡುಬಿದಿರೆಯಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.
ಡಾ. ಎಂ. ಮೋಹನ ಆಳ್ವ ಅಭಿನಂದನಾ ಸಮಿತಿ–2027ರ ವತಿಯಿಂದ ಶನಿವಾರ ಪಿಲಿಕುಳದ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಅಭಿನಂದನಾ ಸಮಿತಿಯ ಗೌರವಾಧ್ಯಕ್ಷರಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ಉದ್ಯಮಿ ಡಾ. ಪ್ರಕಾಶ್ ಶೆಟ್ಟಿ, ಕಾರ್ಯದರ್ಶಿಯಾಗಿ ಶಶಿಧರ ಶೆಟ್ಟಿ ಬರೋಡ ಮತ್ತು ಚಂದ್ರಹಾಸ ಶೆಟ್ಟಿ, ಕೋಶಾಧಿಕಾರಿಯಾಗಿ ಲೀಲಾಕ್ಷ ಕರ್ಕೇರ ಆಯ್ಕೆಯಾಗಿದ್ದಾರೆ.
ಅಮೃತ ಮಹೋತ್ಸವದ ಅಂಗವಾಗಿ ಸುಮಾರು 15 ಕೋಟಿ ರೂ. ವೆಚ್ಚದ ಸಮಾಜಮುಖಿ ಯೋಜನೆಗಳನ್ನು ರೂಪಿಸುವ ಉದ್ದೇಶವಿದೆ. ಮೋಹನ ಆಳ್ವ ಅವರ ವಿದ್ಯಾರ್ಥಿಗಳಿಂದ ಗುರುದಕ್ಷಿಣೆ ಸಂಗ್ರಹಿಸಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಹಾಗೂ 10 ಸಾವಿರ ಜನರಿಗೆ ಉಚಿತ ಡಯಾಲಿಸಿಸ್ ಸೌಲಭ್ಯ ಕಲ್ಪಿಸುವ ಯೋಜನೆ ರೂಪಿಸಲಾಗಿದೆ. ವೃದ್ಧರು ಜೀವನದ ಕೊನೆಯ ದಿನಗಳನ್ನು ನೆಮ್ಮದಿಯಿಂದ ಕಳೆಯಲು ‘ಹ್ಯಾಪಿ ಡೆತ್’ ಎಂಬ ವಿನೂತನ ಯೋಜನೆಯನ್ನೂ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಕಾರ್ಯಕ್ರಮಕ್ಕಾಗಿ ಒಟ್ಟು 75 ಸಮಿತಿಗಳನ್ನು ರಚಿಸಲು ನಿರ್ಧರಿಸಲಾಗಿದೆ.
ಕಾರ್ಯಕ್ರಮದಲ್ಲಿ ಬ್ಯಾನರ್, ಫ್ಲೆಕ್ಸ್ ಅಳವಡಿಕೆ, ಹೂಗುಚ್ಛ ಹಾಗೂ ಶಾಲು ಹಾಕುವ ಸಂಪ್ರದಾಯಗಳಿಗೆ ಅವಕಾಶ ನೀಡದಿರಲು ಸಭೆ ತೀರ್ಮಾನಿಸಿದೆ.
ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಒಂದು ಲಕ್ಷ ರೂ. ಕೊಡುಗೆ ಘೋಷಿಸಿದರು. ಉದ್ಯಮಿ ಡಾ. ಪ್ರಕಾಶ್ ಶೆಟ್ಟಿ, ಮಾಜಿ ಸಚಿವ ರಮಾನಾಥ ರೈ ಸೇರಿದಂತೆ ಹಲವು ಗಣ್ಯರು ಮೋಹನ ಆಳ್ವ ಅವರ ಸಮಾಜಮುಖಿ ಸೇವೆ ಹಾಗೂ ಸಾಧನೆಗಳನ್ನು ಸ್ಮರಿಸಿದರು.
Previous Article
ಗೇರು ಕೃಷಿಯಲ್ಲಿ ಹೊಸ ತಂತ್ರಜ್ಞಾನ: ‘ಗೇರು ಸ್ಪೆಷಲ್’ ಅನಾವರಣ
ಗೇರು ಕೃಷಿಯಲ್ಲಿ ಹೊಸ ತಂತ್ರಜ್ಞಾನ: ‘ಗೇರು ಸ್ಪೆಷಲ್’ ಅನಾವರಣ

