ವಿಟ್ಲ, : ಗೇರು ಕೃಷಿಯಲ್ಲಿ ಇಳುವರಿ ಹೆಚ್ಚಿಸುವ ನಿಟ್ಟಿನಲ್ಲಿ ಭಾರತದಲ್ಲೇ ಮೊದಲ ಬಾರಿಗೆ ಗೇರು ಮರದ ಚಿಗುರು ಹಾಗೂ ಹೂಗಳಿಗೆ ಸಿಂಪಡಿಸುವ ನೂತನ ‘ಗೇರು ಸ್ಪೆಷಲ್’ ತಂತ್ರಜ್ಞಾನವನ್ನು ವಿಟ್ಲದಲ್ಲಿ ಅನಾವರಣಗೊಳಿಸಲಾಯಿತು.
ಐಸಿಎಆರ್-ಡಿಸಿಆರ್ ಪುತ್ತೂರು, ಆರ್ಕೆವಿವೈ-ರಫ್ತಾರ್ ಯೋಜನೆ, ಕರ್ನಾಟಕ ಸರ್ಕಾರ ಹಾಗೂ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ನಿಯಮಿತ (FPC) ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಐಸಿಎಆರ್-ಡಿಸಿಆರ್ ಪುತ್ತೂರಿನ ನಿರ್ದೇಶಕ ಡಾ. ದಿನಕರ ಅಡಿಗ ಅವರು ನೂತನ ತಂತ್ರಜ್ಞಾನವನ್ನು ಉದ್ಘಾಟಿಸಿದರು. ಸಂಸ್ಥೆಯ ವಿಜ್ಞಾನಿಗಳಾದ ಡಾ. ವೀಣಾ ಜಿ.ಎಲ್., ಡಾ. ಅಶ್ವತಿ ಚಂದ್ರಶೇಖರ್ ಹಾಗೂ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.
ಐಸಿಎಆರ್-ಡಿಸಿಆರ್ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಈ ತಂತ್ರಜ್ಞಾನವು ಗೇರು ಮರದಲ್ಲಿ ಚಿಗುರು ಮತ್ತು ಹೂ ಉದುರುವ ಸಮಸ್ಯೆಯನ್ನು ನಿಯಂತ್ರಿಸಿ, ಹೆಚ್ಚಿನ ಕಾಯಿ ಕಚ್ಚಲು ಸಹಕಾರಿಯಾಗಲಿದೆ. ಕಾರ್ಯಕ್ರಮದಲ್ಲಿ ರೈತರಿಗೆ ಸಿಂಪಡಿಸುವ ವಿಧಾನ, ಸೂಕ್ತ ಸಮಯ ಹಾಗೂ ಮುನ್ನೆಚ್ಚರಿಕೆಗಳ ಕುರಿತು ವಿಜ್ಞಾನಿಗಳು ಮಾಹಿತಿ ನೀಡಿದರು.



