ಮಂಗಳೂರು: ರಾಜ್ಯ ಸರ್ಕಾರದ ಆಡಳಿತ ವೈಖರಿ ಹಾಗೂ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಿ, ಪಕ್ಷದ ಹೋರಾಟಕ್ಕೆ ಸಂಘಟಿತ ರೂಪ ನೀಡುವ ಉದ್ದೇಶದಿಂದ ನವೆಂಬರ್ 12ರಂದು ಜೆಡಿಎಸ್ ಪಕ್ಷದ ಸರ್ವಸದಸ್ಯರ ಸಭೆ ಕರೆಯಲಾಗಿದೆ.
ಮಂಗಳೂರಿನ ಕೊಡಿಯಾಲ್ ಬೈಲ್ನ ಖಾಸಗಿ ಹೋಟೆಲ್ನಲ್ಲಿ ಬೆಳಿಗ್ಗೆ 11 ಗಂಟೆಗೆ ಸಭೆ ನಡೆಯಲಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ವಸಂತ್ ಪೂಜಾರಿ ತಿಳಿಸಿದ್ದಾರೆ.
ಮಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಜನರಿಗೆ ಹಲವು ಭರವಸೆಗಳನ್ನು ನೀಡಿ ಸಂಪುಟ ಸಭೆ ನಡೆಸಿದ ರಾಜ್ಯ ಸರ್ಕಾರ ಜನಸಾಮಾನ್ಯರ ಸಮಸ್ಯೆಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಸ್ಪಂದಿಸಿಲ್ಲ ಎಂದು ಟೀಕಿಸಿದರು.
ಹಾಲು, ಮೊಸರು, ಬಸ್ ಪ್ರಯಾಣ ದರ ಹಾಗೂ ಹೋಟೆಲ್ ದರ ಏರಿಕೆಯಿಂದ ಜನಸಾಮಾನ್ಯರು ಮತ್ತು ವಿವಿಧ ಕ್ಷೇತ್ರಗಳ ಉದ್ಯೋಗಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿವಿಧ ಹಗರಣಗಳ ಆರೋಪಗಳಿಂದ ಸರ್ಕಾರ ಸುತ್ತುವರಿದಿದ್ದು, ಗೃಹಲಕ್ಷ್ಮಿ ಯೋಜನೆಯ ಮೂರು ತಿಂಗಳ ಬಾಕಿ ಹಣ ಬಿಡುಗಡೆ ಕುರಿತು ಭಾರೀ ಪ್ರಚಾರ ನಡೆಸಿದರೂ ಫಲಾನುಭವಿಗಳಿಗೆ ಇನ್ನೂ ಹಣ ತಲುಪಿಲ್ಲ ಎಂದು ಆರೋಪಿಸಿದರು.
ರಾಜ್ಯ ಸರ್ಕಾರದ ಘೋಷಣೆ ಮತ್ತು ಅನುಷ್ಠಾನದ ನಡುವಿನ ಅಂತರವನ್ನು ಜನರ ಮುಂದಿಡುವ ಜೊತೆಗೆ, ಮುಂದಿನ ಹೋರಾಟದ ರೂಪುರೇಷೆಗಳನ್ನು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ವಸಂತ್ ಪೂಜಾರಿ ತಿಳಿಸಿದರು.



