ಮಂಗಳೂರು: ಮಾಂಡ್ ಸೊಭಾಣ್ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಪ್ರಥಮ ವಿಶ್ವ ಕೊಂಕಣಿ ಸಂಗೀತ ಸಮ್ಮೇಳನದ ಅಂಗವಾಗಿ ಆಯೋಜಿಸಿರುವ 300 ಗಂಟೆಗಳ ಕೊಂಕಣಿ ಗಾಯನ ಮ್ಯಾರಥಾನ್ ಗಿನ್ನಿಸ್ ದಾಖಲೆ ನಿರ್ಮಿಸಲಿ ಎಂದು ಶಾಸಕ ವೇದವ್ಯಾಸ ಕಾಮತ್ ಶುಭ ಹಾರೈಸಿದರು.
ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯುತ್ತಿರುವ ಸಂಗೀತ ಸಮ್ಮೇಳನಕ್ಕೆ ಭೇಟಿ ನೀಡಿದ ಅವರು, 300 ತಂಡಗಳು, 6,700ಕ್ಕೂ ಹೆಚ್ಚು ಗಾಯಕರು ಹಾಗೂ 4,500ಕ್ಕೂ ಅಧಿಕ ಹಾಡುಗಳ ಮೂಲಕ ಕೊಂಕಣಿ ಭಾಷೆ, ಸಂಸ್ಕೃತಿ ಮತ್ತು ಸಂಗೀತ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಪ್ರಯತ್ನ ಶ್ಲಾಘನೀಯ ಎಂದರು.
ಹಗಲು-ರಾತ್ರಿ ವಿರಾಮವಿಲ್ಲದೆ 300 ಗಂಟೆಗಳ ಕಾಲ ಗಾಯನ ನಡೆಸುವುದು ಸುಲಭದ ಸಾಧನೆಯಲ್ಲ. ಈಗಾಗಲೇ ಅರ್ಧಕ್ಕಿಂತ ಹೆಚ್ಚು ಹಾದಿ ಕ್ರಮಿಸಿರುವ ಮಾಂಡ್ ಸೊಭಾಣ್ ಸಂಸ್ಥೆಯ ಈ ಸಾಹಸಕ್ಕೆ ಅಭಿನಂದನೆ ಸಲ್ಲಿಸಿದ ಅವರು, ವಿವಿಧ ದೇಶಗಳ ತಂಡಗಳು ಹಾಗೂ ಸ್ಥಳೀಯ ಸಂಗೀತ ಪ್ರೇಮಿಗಳ ಉತ್ಸಾಹಭರಿತ ಪಾಲ್ಗೊಳ್ಳುವಿಕೆ ಸಂತಸ ತಂದಿದೆ ಎಂದು ಹೇಳಿದರು.
ಈ ವಿಶಿಷ್ಟ ಸಂಗೀತ ಪ್ರಯತ್ನ ವಿಶ್ವದ ಗಮನ ಸೆಳೆದು ಗಿನ್ನಿಸ್ ದಾಖಲೆಯಲ್ಲಿ ಸ್ಥಾನ ಪಡೆಯಲಿ ಎಂದು ಅವರು ಹಾರೈಸಿದರು.



