ಬೆಳ್ತಂಗಡಿ, ನ. 6: ಗ್ರಾಮಾಭಿವೃದ್ಧಿ ಯೋಜನೆ ಆರಂಭವಾದ ಬಳಿಕ ದೂರದ ಊರುಗಳಲ್ಲಿ ಉದ್ಯೋಗ ಮಾಡುತ್ತಿದ್ದ ಅನೇಕರು ತಮ್ಮ ಊರಿಗೆ ಮರಳಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಆರ್ಥಿಕ ಪ್ರಗತಿ ಸಾಧಿಸಿದ್ದಾರೆ. ಹಲವು ಕುಟುಂಬಗಳು ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರಣವಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಬೆಳ್ತಂಗಡಿಯ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಗುರುವಾರ ನಡೆದ ಯೋಜನೆಯ ಹಿರಿಯ ಫಲಾನುಭವಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
44 ವರ್ಷಗಳ ಹಿಂದೆ ಗ್ರಾಮ ಗ್ರಾಮಗಳಿಗೆ, ಮನೆ ಮನೆಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿ, ಅಗತ್ಯ ನೆರವು ಒದಗಿಸುವ ಉದ್ದೇಶದಿಂದ ಯೋಜನೆ ಆರಂಭಿಸಲಾಯಿತು. ಅಂದು ಯುವಕರಾಗಿದ್ದ ಫಲಾನುಭವಿಗಳು ಇಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಆರ್ಥಿಕವಾಗಿ ಸಬಲರಾಗಿದ್ದಾರೆ. ಅವರಿಗೂ ವಯಸ್ಸಾಗಿದೆ, ನಮಗೂ ವಯಸ್ಸಾಗಿದೆ. ಎಲ್ಲರೂ ಒಂದೆಡೆ ಸೇರಿ ಪರಸ್ಪರ ಕ್ಷೇಮಸಮಾಚಾರ ಹಂಚಿಕೊಳ್ಳುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಯೋಜನೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬೆಳೆಯಲು ಕಾರ್ಯಕರ್ತರ ಅವಿರತ ಶ್ರಮವೇ ಪ್ರಮುಖ ಕಾರಣ ಎಂದು ಹೇಳಿದರು.
ಜ್ಞಾನವಿಕಾಸ ಯೋಜನೆಯ ಸ್ಥಾಪಕಾಧ್ಯಕ್ಷೆ ಹೇಮಾವತಿ ವಿ. ಹೆಗ್ಗಡೆ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಫಲಾನುಭವಿಗಳು ಕ್ಷೇತ್ರಕ್ಕೆ ಭೇಟಿ ನೀಡಿ ತಮ್ಮ ಜೀವನದ ಬೆಳವಣಿಗೆ ಹಾಗೂ ಸಾಧನೆಗಳನ್ನು ಹಂಚಿಕೊಳ್ಳುವಾಗ ಅಪಾರ ಸಂತೋಷವಾಗುತ್ತದೆ. ಅದುವೇ ನಮಗೆ ದೊರೆಯುವ ಯಶಸ್ಸಿನ ಪ್ರಮಾಣಪತ್ರವಾಗಿದೆ ಎಂದರು.
ಯೋಜನೆಯ ಫಲಾನುಭವಿಗಳ ಹಿತದೃಷ್ಟಿಯಿಂದ ಡಾ. ಹೆಗ್ಗಡೆಯವರು ಬ್ಯಾಂಕ್ಗಳಿಂದ ಕೋಟ್ಯಂತರ ರೂಪಾಯಿ ಸಾಲ ಪಡೆದು ವಿವಿಧ ಕಾರ್ಯಕ್ರಮಗಳಿಗೆ ನೆರವಾಗಿದ್ದಾರೆ. ಫಲಾನುಭವಿಗಳಿಗಾಗಿ ಸಾಲ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಅನೇಕ ರಾತ್ರಿ ಚೆಕ್ಗಳಿಗೆ ಸಹಿ ಹಾಕುತ್ತಾ ಕಳೆದಿದ್ದಾರೆ. ಜನರ ನೆಮ್ಮದಿಗಾಗಿ ರೂಪಿಸಿದ ಕಾರ್ಯಕ್ರಮಗಳನ್ನು ಎಷ್ಟೇ ಸವಾಲುಗಳು ಎದುರಾದರೂ ನಿಲ್ಲಿಸದೆ ಮುಂದುವರಿಸಿದ್ದಾರೆ. ಹಿಂದೆ ರಸ್ತೆಗಳೇ ಇಲ್ಲದ ಕಾಲದಲ್ಲಿ ಕಾರ್ಯಕರ್ತರು ಸೈಕಲ್ಗಳಲ್ಲಿ ಗ್ರಾಮಗಳಿಗೆ ತೆರಳಿ ಯೋಜನೆಯ ಯಶಸ್ಸಿಗಾಗಿ ಶ್ರಮಿಸಿದ್ದಾರೆ. ಅವರ ಸೇವೆ ಸ್ಮರಣೀಯ ಎಂದರು.
ಸೌಲಭ್ಯ ವಿತರಣೆ: ಕಾರ್ಯಕ್ರಮದಲ್ಲಿ ವಿವಿಧ ಫಲಾನುಭವಿಗಳಿಗೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸೌಲಭ್ಯಗಳನ್ನು ವಿತರಿಸಿದರು. ಹಿರಿಯ ಸದಸ್ಯರು ತಮ್ಮ ಅನುಭವ ಹಾಗೂ ಅನಿಸಿಕೆಗಳನ್ನು ಹಂಚಿಕೊಂಡರು.
ಯೋಜನೆಯ ಕಾರ್ಯನಿರತ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕ ಆನಂದ ಸುವರ್ಣ ಸ್ವಾಗತಿಸಿದರು. ಯೋಜನಾಧಿಕಾರಿ ಯಶೋಧರ ವಂದಿಸಿದರು. ರಾಮ್ ಕುಮಾರ್ ಮತ್ತು ಮಧುರಾ ಕಾರ್ಯಕ್ರಮ ನಿರೂಪಿಸಿದರು.




