ಹಾಸನ: ಹಲವು ತಿಂಗಳುಗಳಿಂದ ನಮ್ಮ ಕುಟುಂಬಕ್ಕೆ ತೊಂದರೆ ನೀಡಿದವರನ್ನು ನೀನೇ ನೋಡಿಕೋ ತಾಯಿ ಎಂದು ಹಾಸನಾಂಬೆಯಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಹೇಳಿದರು.
ಹಾಸನಾಂಬೆಯ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ತಂದೆ-ತಾಯಿಗೆ ಕಣ್ಣೀರು ಹಾಕಿಸಿದವರನ್ನು ನೀನೇ ನೋಡಿಕೋ ತಾಯಿ ಎಂದು ಪ್ರಾರ್ಥಿಸಿ ಬಂದಿದ್ದೇನೆ. ರಾಜ್ಯದ ರೈತರು ಹಾಗೂ ಜನರು ಚೆನ್ನಾಗಿರಬೇಕು. ಮಳೆ-ಬೆಳೆ ಸಮೃದ್ಧವಾಗಿ ಆಗಬೇಕು ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಕೆಲವರು ‘ಹಳ್ಳಿಗುಗ್ಗು’ ಎಂದು ಟೀಕಿಸುತ್ತಾರೆ. ಆದರೆ ಈ ಹಳ್ಳಿಗುಗ್ಗು ಕುಟುಂಬ ಕಳೆದ 50 ವರ್ಷಗಳಿಂದ ರಾಜ್ಯದ ಸೇವೆ ಮಾಡಿದೆ. ರಾಜ್ಯದ ಅಭಿವೃದ್ಧಿಗೆ ಈ ಹಳ್ಳಿಗುಗ್ಗನೇ ಬರಬೇಕು ಎಂದು ಹೇಳುವ ಮೂಲಕ ಕುಮಾರಸ್ವಾಮಿ ಅವರ ಪರವಾಗಿ ರೇವಣ್ಣ ಮಾತನಾಡಿದರು.
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯದಲ್ಲಿ ಪಿಯು, ಪದವಿ, ವೈದ್ಯಕೀಯ ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳ ಸ್ಥಾಪನೆಗೆ ಆದ್ಯತೆ ನೀಡಲಾಗಿತ್ತು. 1,600 ಪ್ರೌಢಶಾಲೆಗಳನ್ನು ಮಂಜೂರು ಮಾಡಿದ್ದು, ಸುಮಾರು 50 ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಕಾಲೇಜುಗಳೇ ಇರಲಿಲ್ಲ. ನಮ್ಮ ಆಡಳಿತಾವಧಿಯಲ್ಲಿ 5,000 ರೂ.ಗಳಿಗೆ ಟಿಸಿ ನೀಡುವ ವ್ಯವಸ್ಥೆ ಮಾಡಿದ್ದೇವೆ. ಇಂತಹ ಅಭಿವೃದ್ಧಿ ಕಾರ್ಯಗಳನ್ನು ಕುಮಾರಸ್ವಾಮಿ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡರು.
ಹಲವು ವರ್ಷಗಳಿಂದ ಆಡಳಿತ ನಡೆಸಿದ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸಿದ ಅವರು, ಹಳ್ಳಿಗುಗ್ಗುಗಳೇ ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿಗಳಾಗಿ ಕೆಲಸ ಮಾಡಿದ್ದಾರೆ. ಇಂದಿನಿಂದ ಆರಂಭವಾಗುವ ಬೆಳವಣಿಗೆಗಳನ್ನು ನಾವೂ ಗಮನಿಸುತ್ತೇವೆ ಎಂದರು.
ಕುಮಾರಸ್ವಾಮಿಗೆ ಕೋಟು-ಬೂಟಿನ ರಾಜಕಾರಣ ಗೊತ್ತಿಲ್ಲ. ನಾಜೂಕಿನ ಪಾತ್ರ ನಿರ್ವಹಿಸುವುದೂ ಅವರಿಂದ ಸಾಧ್ಯವಿಲ್ಲ. ಅವರ ರಾಷ್ಟ್ರೀಯ ನಾಯಕರು ವರ್ಷದಲ್ಲಿ ಒಂಬತ್ತು ತಿಂಗಳು ಎಲ್ಲಿರುತ್ತಾರೆ? ವಿದೇಶದಲ್ಲಿರುತ್ತಾರೆಯೇ ಅಥವಾ ಜನರು ಮತ್ತು ರೈತರ ನಡುವೆ ಇರುತ್ತಾರೆಯೇ ಎಂದು ಪ್ರಶ್ನಿಸುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಕುಟುಂಬಕ್ಕೆ ತೊಂದರೆ ನೀಡಿದವರನ್ನು ಹಾಸನಾಂಬೆ ನೋಡಿಕೊಳ್ಳಲಿ ಎಂದು ಪ್ರಾರ್ಥಿಸಿದ್ದೇನೆ: ಎಚ್.ಡಿ. ರೇವಣ್ಣ
Previous Article
ಹೊಸ ವಲಯ ನಿಯಮಾವಳಿಗಳಿಂದ ಜನಸಾಮಾನ್ಯರಿಗೆ ತೊಂದರೆ: ಕೃಷ್ಣ ಜೆ. ಪಾಲೆಮಾರ್
ಹೊಸ ವಲಯ ನಿಯಮಾವಳಿಗಳಿಂದ ಜನಸಾಮಾನ್ಯರಿಗೆ ತೊಂದರೆ: ಕೃಷ್ಣ ಜೆ. ಪಾಲೆಮಾರ್

