ಮಂಗಳೂರು: ಸೌದಿ ಅರೇಬಿಯಾದ ವಿಮಾನ ನಿಲ್ದಾಣಗಳ ಮೇಲೆ ಹೌತಿ ಬಂಡುಕೋರರು ನಡೆಸಿದ ಕ್ಷಿಪಣಿ ಹಾಗೂ ಡ್ರೋನ್ ದಾಳಿಯಿಂದಾಗಿ ಪ್ರಮುಖ ವಿಮಾನ ಸೇವೆಗಳು ದಿಢೀರ್ ಸ್ಥಗಿತಗೊಂಡಿದ್ದು, ಕರಾವಳಿ ಮೂಲದ ನೂರಾರು ಉಮ್ರಾ ಯಾತ್ರಾರ್ಥಿಗಳು ಹಾಗೂ ತುರ್ತು ಪ್ರಯಾಣಿಕರು ಅತಂತ್ರ ಸ್ಥಿತಿಯಲ್ಲಿದ್ದಾರೆ.
ಉಮ್ರಾ ಯಾತ್ರೆಗಾಗಿ ತೆರಳಿದ್ದ ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಯಾತ್ರಾರ್ಥಿಗಳು ಸೌದಿ ಅರೇಬಿಯಾದಿಂದ ತವರಿಗೆ ಮರಳಲಾಗದೆ ಸಂಕಷ್ಟ ಎದುರಿಸುತ್ತಿದ್ದಾರೆ.
ದಮ್ಮಾಮ್ ವಿಮಾನ ನಿಲ್ದಾಣದಲ್ಲಿ ಸ್ಫೋಟದ ಭೀತಿ
ಅಕ್ಟೋಬರ್ 22ರಂದು ದಮ್ಮಾಮ್ ವಿಮಾನ ನಿಲ್ದಾಣದಿಂದ ಮಂಗಳೂರಿಗೆ ಮರಳಬೇಕಿದ್ದ ಪ್ರಯಾಣಿಕರು ಬೋರ್ಡಿಂಗ್ ಮತ್ತು ಇಮಿಗ್ರೇಷನ್ ಪ್ರಕ್ರಿಯೆ ಪೂರ್ಣಗೊಳಿಸುತ್ತಿದ್ದಂತೆಯೇ ದಾಳಿಯ ಭೀತಿಯಿಂದ ಸುರಕ್ಷಿತ ಸ್ಥಳಗಳಿಗೆ ಓಡುವಂತೆ ಸೂಚಿಸಲಾಯಿತು. ಇದಾದ ಕೆಲವೇ ಕ್ಷಣಗಳಲ್ಲಿ ಸ್ಫೋಟದ ಶಬ್ದ ಕೇಳಿಬಂದಿದ್ದು, ಪ್ರಯಾಣಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು.
500ಕ್ಕೂ ಹೆಚ್ಚು ಮಂದಿ ವಾಪಸ್, 160 ಯಾತ್ರಿಕರು ಇನ್ನೂ ಸೌದಿಯಲ್ಲೇ
ದಕ್ಷಿಣ ಕನ್ನಡ ಹಜ್ ಆಂಡ್ ಉಮ್ರಾ ಪ್ರೈವೇಟ್ ಟೂರ್ ಆರ್ಗನೈಸರ್ಸ್ ಅಸೋಸಿಯೇಶನ್ ನೀಡಿದ ಮಾಹಿತಿಯಂತೆ, ನೋಂದಾಯಿತ ಏಜೆನ್ಸಿಗಳ ಮೂಲಕ ತೆರಳಿದ್ದ 500ಕ್ಕೂ ಹೆಚ್ಚು ಯಾತ್ರಿಕರು ಈಗಾಗಲೇ ಮಂಗಳೂರಿಗೆ ಸುರಕ್ಷಿತವಾಗಿ ಮರಳಿದ್ದಾರೆ.
ಆದರೆ, ಪುತ್ತೂರಿನ ತಂಡವೂ ಸೇರಿದಂತೆ ನಾಲ್ಕು ವಿಭಿನ್ನ ಗುಂಪುಗಳ ಸುಮಾರು 160 ಯಾತ್ರಾರ್ಥಿಗಳು ಇನ್ನೂ ಸೌದಿ ಅರೇಬಿಯಾದಲ್ಲಿ ಸಿಲುಕಿಕೊಂಡಿದ್ದಾರೆ. ಅವರಿಗೆ ಸ್ಥಳೀಯವಾಗಿ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಝಾಕಿರ್ ಇಕ್ಲಾಸ್ ತಿಳಿಸಿದ್ದಾರೆ.
ಪರ್ಯಾಯ ಮಾರ್ಗಗಳ ಮೂಲಕ ತವರಿಗೆ ಪಯಣ
ನೇರ ವಿಮಾನ ಸೇವೆ ರದ್ದಾಗಿರುವುದರಿಂದ ವೈಯಕ್ತಿಕವಾಗಿ ತೆರಳಿದ್ದ ಯಾತ್ರಾರ್ಥಿಗಳು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಕೆಲವರು ರಸ್ತೆ ಮಾರ್ಗವಾಗಿ ಕತಾರ್ ತಲುಪಿ ಅಲ್ಲಿಂದ ಕೊಚ್ಚಿ ಅಥವಾ ಬೆಂಗಳೂರಿಗೆ ವಿಮಾನ ಹಿಡಿಯುತ್ತಿದ್ದರೆ, ಮತ್ತೆ ಕೆಲವರು ಬಹರೇನ್ ಮತ್ತು ದುಬೈ ಮಾರ್ಗವಾಗಿ ಭಾರತಕ್ಕೆ ಮರಳುತ್ತಿದ್ದಾರೆ.
ಸಂಕಷ್ಟದಲ್ಲಿರುವ ಕನ್ನಡಿಗರನ್ನು ತಾಯ್ನಾಡಿಗೆ ಕರೆತರಲು ಕೇಂದ್ರ ಸರ್ಕಾರ ತಕ್ಷಣವೇ ಚಾರ್ಟರ್ಡ್ ವಿಮಾನಗಳು ಅಥವಾ ವಿಶೇಷ ಸೇವೆಗಳನ್ನು ಒದಗಿಸಬೇಕೆಂದು ಸಂತ್ರಸ್ತ ಕುಟುಂಬಗಳು ಮನವಿ ಮಾಡಿವೆ.



