ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ ಅವರು ಮಂಗಳವಾರ ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಪರಿಶೀಲಿಸಿದರು.
ಬಜಾಲ್ನಲ್ಲಿರುವ ಪ್ಲಾಸ್ಟಿಕ್ ಫಿಶರ್ ಸ್ವಯಂಸೇವಾ ಸಂಸ್ಥೆ ನಿರ್ವಹಿಸುತ್ತಿರುವ ಮೆಟೀರಿಯಲ್ ರಿಕವರಿ ಪ್ಲಾಂಟ್ಗೆ ಭೇಟಿ ನೀಡಿ ತ್ಯಾಜ್ಯ ಮರುಬಳಕೆ ಪ್ರಕ್ರಿಯೆಯನ್ನು ವೀಕ್ಷಿಸಿದರು. ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ಪಾಲಿಕೆಯಿಂದ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.
ಬಳಿಕ ಜೆಪ್ಪಿನಮೊಗರು–ಕುಡ್ಪಾಡಿ ರಸ್ತೆಯ ರಾಜಕಾಲುವೆಯಲ್ಲಿ ಅಳವಡಿಸಿರುವ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣಾ ವ್ಯವಸ್ಥೆಯನ್ನು ಪರಿಶೀಲಿಸಿದರು. ಆಂಕರಿಂಗ್ ವ್ಯವಸ್ಥೆಯ ಮೂಲಕ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸುವ ವಿಧಾನವನ್ನು ಸಂಸ್ಥೆಯ ಪ್ರತಿನಿಧಿಗಳು ವಿವರಿಸಿದರು. ಸಾಮಾನ್ಯ ದಿನಗಳಲ್ಲಿ 7ರಿಂದ 10 ದಿನಗಳಿಗೊಮ್ಮೆ ಹಾಗೂ ಮಳೆಗಾಲದಲ್ಲಿ ನಾಲ್ಕು ದಿನಗಳಿಗೊಮ್ಮೆ ತ್ಯಾಜ್ಯ ಸಂಗ್ರಹಿಸಿ ತೆರವುಗೊಳಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.



