ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಭಾಗಮಂಡಲ ಸಮೀಪದ ತಲಕಾವೇರಿ ವನ್ಯಧಾಮದಲ್ಲಿ ಕಳ್ಳಬೇಟೆಗೆ ತೆರಳಿದ್ದ ಎಂಟು ಮಂದಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದು, ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ. ಬಂಧಿತರಿಂದ ಬಂದೂಕು, ಮದ್ದು-ಗುಂಡುಗಳು ಹಾಗೂ ಮೂರು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ವನ್ಯಧಾಮದೊಳಗೆ ಬೇಟೆಗಾರರು ಮೂರು ಸುತ್ತು ಗುಂಡಿನ ದಾಳಿ ನಡೆಸಿದ ಶಬ್ದ ಕೇಳಿ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಆರ್‌ಎಫ್‌ಒ ತ್ಯಾಗರಾಜ್ ನೇತೃತ್ವದಲ್ಲಿ ಬೆಳಗಿನ ಜಾವ ಕಾರ್ಯಾಚರಣೆ ನಡೆಸಲಾಗಿದ್ದು, ಅರಣ್ಯದೊಳಗಿನ ರಸ್ತೆಯಲ್ಲಿ ನಿಂತಿದ್ದ ಬೇಟೆಗಾರರ ವಾಹನಗಳನ್ನು ಪತ್ತೆಹಚ್ಚಲಾಗಿದೆ.
ಕಾರ್ಯಾಚರಣೆ ವೇಳೆ ಸಿಂಗತ್ತೂರು ಗ್ರಾಮದ ವಸಂತ ಎಂಬುವರಿಗೆ ಸೇರಿದ ಒಂಟಿ ನಳಿಕೆಯ ಕೋವಿಯನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಮಂದಿಯನ್ನು ಬಂಧಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಪರಾರಿಯಾದ ಮತ್ತೊಬ್ಬ ಆರೋಪಿಯ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಘಟನಾ ಸ್ಥಳಕ್ಕೆ ಎಸಿಎಫ್ ಅನನ್ಯ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಂಧಿತರ ಬಿಡುಗಡೆಗೆ ರಾಜಕೀಯ ಒತ್ತಡ ಹೇರಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.
ಬಂಧಿತ ಎಂಟು ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ. ತಲಕಾವೇರಿ ವನ್ಯಧಾಮದೊಳಗೆ ಕಳ್ಳಬೇಟೆಗೆ ತೆರಳಿರುವ ಪ್ರಕರಣ ಅರಣ್ಯ ವಲಯದಲ್ಲಿ ಆತಂಕ ಮೂಡಿಸಿದೆ.



