ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಮೀನುಗಾರಿಕಾ ಬಂದರಿನಲ್ಲಿ ನಡೆದ ದುರಂತದಲ್ಲಿ ಮೂವರು ಮೀನುಗಾರರು ಮೃತಪಟ್ಟಿದ್ದು, ಮತ್ತೊಬ್ಬ ಮೀನುಗಾರ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಟೊಂಕೆ ಮೀನಿನ ತೀವ್ರ ವಾಸನೆಯಿಂದ ಈ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
ತದಡಿ ಬಂದರಿನಲ್ಲಿ ಕುಜಿಮಾ ಬೋಟ್ನಲ್ಲಿ ಈ ಘಟನೆ ಸಂಭವಿಸಿದೆ. ಮೃತರನ್ನು ಹೊನ್ನಳ್ಳಿಯ ಅಮನ್ ಆಯುಧ್ ಲಂಗಡೋ (18), ಕಾಗಾಲದ ಸೌಖಾದ್ ಅಲೀಕಾ ರಾಜನ್ (35) ಹಾಗೂ ಕಾಗಾಲದ ಅಮೀರ್ ಅಬ್ದುಲ್ ಉಂಚಳ್ಳಿ (20) ಎಂದು ಗುರುತಿಸಲಾಗಿದೆ.
ಇದೇ ಘಟನೆಯಲ್ಲಿ ವನ್ನಳ್ಳಿಯ ಖಾಷಿಮ್ ಅಬ್ಬಾಸ್ ಇಂಗ್ರೇಜಿ (46) ಅವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಅಸ್ವಸ್ಥರಾದ ಮೀನುಗಾರರನ್ನು ಗೋಕರ್ಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೂವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಟೊಂಕೆ ಮೀನಿನ ತೀವ್ರ ವಾಸನೆ ಅಥವಾ ಅದರಿಂದ ಉಂಟಾದ ವಿಷಕಾರಿ ಅನಿಲದ ಪರಿಣಾಮವಾಗಿ ಮೀನುಗಾರರು ಅಸ್ವಸ್ಥರಾಗಿರಬಹುದೇ ಎಂಬ ಅನುಮಾನ ವ್ಯಕ್ತವಾಗಿದೆ. ಘಟನೆಯ ನಿಖರ ಕಾರಣ ಇನ್ನಷ್ಟೇ ಸ್ಪಷ್ಟವಾಗಬೇಕಿದೆ.
ಮೀನುಗಾರಿಕಾ ಬಂದರಿನಲ್ಲಿ ಸಂಭವಿಸಿದ ಈ ದುರಂತ ಸ್ಥಳೀಯ ಮೀನುಗಾರಿಕಾ ವಲಯದಲ್ಲಿ ಆತಂಕ ಮೂಡಿಸಿದೆ.



