ಮಂಗಳೂರು: ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಆಯೋಜಿಸಲಾದ ಮತ್ಸ್ಯೋತ್ಸವ ಮತ್ತು ಮೀನು ಆಹಾರ ಮೇಳವು ಯಶಸ್ವಿಯಾಗಿ ನಡೆಯಿತು. ಪಿಲಿಕುಳದ ವಿಶಾಲ ಕೆರೆಯಲ್ಲಿ ಬೆಳೆಸಿದ ಕಾಟ್ಲಾ, ರೋಹು, ಗೌರಿ, ತಿಲೇಪಿಯಾ ಸೇರಿದಂತೆ ವಿವಿಧ ತಳಿಯ ಮೀನುಗಳನ್ನು ಹಿಡಿದು ಮಾರಾಟ ಮಾಡುವ ಮೂಲಕ ಸಾರ್ವಜನಿಕರಿಗೆ ಮೀನುಗಾರಿಕೆ ಮತ್ತು ಮೀನು ಖಾದ್ಯಗಳ ವೈವಿಧ್ಯತೆಯನ್ನು ಪರಿಚಯಿಸಲಾಯಿತು. ಮೇಳದಲ್ಲಿ 2,000ಕ್ಕೂ ಹೆಚ್ಚು ಮಂದಿ ಭಾಗವಹಿಸಿದರು.
ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರವು ಪರಿಸರ ಸ್ನೇಹಿ ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ವಿವಿಧ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಈ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಿಗೆ, ವಿಶೇಷವಾಗಿ ವಿದ್ಯಾರ್ಥಿಗಳಿಗೆ, ಜೀವವೈವಿಧ್ಯತೆ, ಕಲೆ ಮತ್ತು ಸಂಸ್ಕೃತಿಯ ಕುರಿತು ಅರಿವು ಮೂಡಿಸಲಾಗುತ್ತಿದೆ.
ಪಿಲಿಕುಳದಲ್ಲಿ ಮೀನುಗಳ ವಿವಿಧ ಪ್ರಭೇದಗಳನ್ನು ಗುರುತಿಸಿ, ಬೆಳೆಸಿ, ಸಂತಾನೋತ್ಪತ್ತಿ ಮಾಡಿಸುವುದರ ಜೊತೆಗೆ ಅವುಗಳನ್ನು ಮೂಲ ಆವಾಸಸ್ಥಾನಕ್ಕೆ ಬಿಡುವ ಕಾರ್ಯವೂ ನಡೆಯುತ್ತಿದೆ. ಇದರ ಭಾಗವಾಗಿ ಕೆರೆಯಲ್ಲಿ ಬೆಳೆಸಿದ ಮೀನುಗಳನ್ನು ಹಿಡಿದು ಪ್ರದರ್ಶಿಸಿ, ಮಾರಾಟ ಮಾಡುವ ಮತ್ಸ್ಯೋತ್ಸವವನ್ನು ಪ್ರತಿವರ್ಷ ಆಯೋಜಿಸಲಾಗುತ್ತಿದೆ.
ಮೂಲ್ಕಿ–ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಅವರು ಮೀನುಗಳನ್ನು ಕೆರೆಗೆ ಬಿಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪ್ರಾಧಿಕಾರದ ಸಮಿತಿಯ ನಾಮನಿರ್ದೇಶಿತ ಸದಸ್ಯರಾದ ಶಿವರಾಮ ಮಲ್ಲಿ ಮತ್ತು ಎನ್.ಜಿ. ಮೋಹನ್, ಪ್ರಾಧಿಕಾರದ ಉಪಸಮಿತಿ ಅಧ್ಯಕ್ಷ ಜಿ. ಶ್ರೀನಿಕೇತನ್ ಹಾಗೂ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ ಜನರಲ್ ಮ್ಯಾನೇಜರ್ ಮಹೇಶ್ ಕುಮಾರ್ ಅತಿಥಿಗಳಾಗಿ ಭಾಗವಹಿಸಿದರು.
ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಅರುಣ್ ಕುಮಾರ್ ಶೆಟ್ಟಿ ಹಾಗೂ ಆಡಳಿತಾಧಿಕಾರಿ ಡಾ. ಅಶೋಕ್ ಕೆ.ಆರ್. ಉಪಸ್ಥಿತರಿದ್ದರು. ಜಗನ್ನಾಥ್ ಕಾರ್ಯಕ್ರಮ ನಿರೂಪಿಸಿದರು. ರಾಮಕೃಷ್ಣ ಮರಾಟಿ ವಂದಿಸಿದರು. ಡಾ. ನಿತಿನ್, ಉದಯ ಕುಮಾರ್ ಶೆಟ್ಟಿ ಹಾಗೂ ನಾಗೇಶ್ ಕುಲಾಲ್ ಇದ್ದರು.



