ಕಾಸರಗೋಡು:ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಹಾಗೂ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ, ಕಾಸರಗೋಡು ಇವುಗಳ ಸಹಯೋಗದಲ್ಲಿ, ಸಿರಿಗೇರಿ ಯರಿಸ್ವಾಮಿ ಅವರ ನೇತೃತ್ವದ ಅನ್ನಪೂರ್ಣ ಪಬ್ಲಿಕೇಶನ್ಸ್ ಆ್ಯಂಡ್ ಕ್ರಿಯೇಷನ್ಸ್, ಸಿರಿಗೇರಿ, ಬಳ್ಳಾರಿ ಜಿಲ್ಲೆ ಇವರ ಸಹಕಾರದೊಂದಿಗೆ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಜನ್ಮ ಶತಮಾನೋತ್ಸವ ಸಮಾರಂಭವನ್ನು ನವೆಂಬರ್ 8ರಂದು ಆಯೋಜಿಸಲಾಗುವುದು.
ಅಂದು ಭಾನುವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಭಾವಗೀತೆಗಳ ಗಾಯನ ಹಾಗೂ ಕವಿಗೋಷ್ಠಿ ನಡೆಯಲಿದೆ. ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಕವಿಗಳಿಗೆ ಕವಿಗೋಷ್ಠಿಯಲ್ಲಿ ಭಾಗವಹಿಸಲು ಹಾಗೂ ಗಾಯಕರಿಗೆ ಭಾವಗೀತೆಗಳನ್ನು ಹಾಡಲು ಅವಕಾಶ ಕಲ್ಪಿಸಲಾಗಿದೆ.
ಆಸಕ್ತ ಕವಿಗಳು ಮತ್ತು ಗಾಯಕರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಲು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು (ಮೊಬೈಲ್: 9448572016 ) ಅವರನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

