ಮಂಗಳೂರು: ಕರ್ನಾಟಕ ಖಾಸಗಿ ವೈದ್ಯಕೀಯ ಸ್ಥಾಪನೆಗಳ ಕಾಯಿದೆ (ಕೆಪಿಎಂಇಎ) ಅಡಿಯಲ್ಲಿ ನೋಂದಣಿ ಪ್ರಮಾಣಪತ್ರವನ್ನು ನವೀಕರಿಸದೆ ಕಾರ್ಯನಿರ್ವಹಿಸುತ್ತಿದ್ದ ಮಂಗಳೂರಿನ ಒಮೆಗಾ ಆಸ್ಪತ್ರೆ ಹಾಗೂ ಸುಳ್ಯದ ಕೆವಿಜಿ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ತಲಾ ₹1 ಲಕ್ಷ ದಂಡ ವಿಧಿಸಿ ಆದೇಶಿಸಿದ್ದಾರೆ.
ಕೆಪಿಎಂಇಎ ನೋಂದಣಿ ಮತ್ತು ಕುಂದುಕೊರತೆ ನಿವಾರಣಾ ಪ್ರಾಧಿಕಾರದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆಸ್ಪತ್ರೆಗಳು ನೋಂದಣಿ ನವೀಕರಣಕ್ಕೆ ಅಗತ್ಯವಾದ ಅಗ್ನಿಶಾಮಕ ಇಲಾಖೆಯ ಪ್ರಮಾಣಪತ್ರ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಮಾಣಪತ್ರಗಳನ್ನು ಸಲ್ಲಿಸದಿರುವುದು ಪರಿಶೀಲನೆ ವೇಳೆ ಗಮನಕ್ಕೆ ಬಂದಿದೆ.
ಮೂರು ವರ್ಷಗಳಿಂದ ನೋಂದಣಿ ನವೀಕರಣ ಬಾಕಿ
ಸುಳ್ಯದ ಕೆವಿಜಿ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು ಕಳೆದ ಮೂರು ವರ್ಷಗಳಿಂದ ಕೆಪಿಎಂಇಎ ನೋಂದಣಿಯನ್ನು ನವೀಕರಿಸದೆ ಕಾರ್ಯನಿರ್ವಹಿಸುತ್ತಿರುವುದು ಸಭೆಯಲ್ಲಿ ತಿಳಿದುಬಂದಿದೆ. ಅಗ್ನಿಶಾಮಕ ಇಲಾಖೆಯ ಪ್ರಮಾಣಪತ್ರ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಮಾಣಪತ್ರ ಸಲ್ಲಿಸದ ಕಾರಣ ನೋಂದಣಿ ನವೀಕರಣ ಬಾಕಿಯಿತ್ತು. ಸದ್ಯ ಅಗ್ನಿಶಾಮಕ ಇಲಾಖೆಯ ಪ್ರಮಾಣಪತ್ರ ಪಡೆದಿದ್ದು, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಮಾಣಪತ್ರ ಪಡೆಯುವುದು ಬಾಕಿಯಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕೆಪಿಎಂಇಎ ಕಾಯಿದೆಯ ಸೆಕ್ಷನ್ 19(1)ರ ಅಡಿಯಲ್ಲಿ ₹1 ಲಕ್ಷ ದಂಡ ವಿಧಿಸಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಒಮೆಗಾ ಆಸ್ಪತ್ರೆಗೂ ದಂಡ
ಮಂಗಳೂರಿನ ಒಮೆಗಾ ಆಸ್ಪತ್ರೆಯು ಕಳೆದ ಒಂದೂವರೆ ವರ್ಷದಿಂದ ಕೆಪಿಎಂಇಎ ನೋಂದಣಿಯನ್ನು ನವೀಕರಿಸದೆ ಕಾರ್ಯನಿರ್ವಹಿಸುತ್ತಿರುವುದು ಸಭೆಯಲ್ಲಿ ಬಹಿರಂಗವಾಗಿದೆ. ಅಗ್ನಿಶಾಮಕ ಇಲಾಖೆಯ ಪ್ರಮಾಣಪತ್ರ ಸಲ್ಲಿಸದ ಕಾರಣ ನೋಂದಣಿ ನವೀಕರಣವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೂ ₹1 ಲಕ್ಷ ದಂಡ ವಿಧಿಸುವುದರ ಜತೆಗೆ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಜಿಲ್ಲೆಯ ಎಲ್ಲ ಆಸ್ಪತ್ರೆಗಳ ಪರಿಶೀಲನೆಗೆ ಸೂಚನೆ
ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಆಸ್ಪತ್ರೆಗಳು ಅಗ್ನಿಶಾಮಕ ಇಲಾಖೆಯ ಪ್ರಮಾಣಪತ್ರ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಗತ್ಯ ಪರವಾನಗಿಗಳನ್ನು ಹೊಂದಿವೆಯೇ ಎಂಬುದನ್ನು ಪರಿಶೀಲಿಸಿ, ದಾಖಲೆಗಳ ಆಡಿಟ್ ನಡೆಸುವಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಆಸ್ಪತ್ರೆಗಳ ಕಡ್ಡಾಯ ದಾಖಲೆಗಳು ಮತ್ತು ಪರವಾನಗಿಗಳ ನಿಯಮಾನುಸಾರ ಪಾಲನೆಯಾಗುತ್ತಿರುವುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಈ ಕ್ರಮ ಮಹತ್ವ ಪಡೆದಿದೆ.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ, ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ. ಶಿವಪ್ರಕಾಶ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ದೀಪಾ ಪ್ರಭು, ಹಿರಿಯ ಮಕ್ಕಳ ತಜ್ಞ ಡಾ. ಶಾಂತರಾಮ ಬಾಳಿಗ, ಐಎಂಎ ಅಧ್ಯಕ್ಷ ಡಾ. ಸದಾನಂದ ಪೂಜಾರಿ, ಕೆ.ಎಸ್. ಹೆಗ್ಡೆ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಸಂದೀಪ್ ರೈ, ಕೌನ್ಸಿಲರ್ ರಾಣಿ ಮಂಗಳ, ವಕೀಲ ಚಂದ್ರಹಾಸ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



