ಮಂಗಳೂರು, ಸೆ.23: ದಕ್ಷಿಣ ಕನ್ನಡ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ರೋಗಿಗಳಿಗೆ ಪ್ರಮುಖ ಆಶ್ರಯವಾಗಿರುವ ಮಂಗಳೂರಿನ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ಇನ್ನೂ 200 ಹಾಸಿಗೆಗಳನ್ನು ಹೆಚ್ಚಿಸುವ ಜತೆಗೆ, ಸಿಬ್ಬಂದಿ ಹಾಗೂ ಅಗತ್ಯ ಉಪಕರಣಗಳನ್ನು ಒದಗಿಸಿ ಆಸ್ಪತ್ರೆಯ ಕಾರ್ಯಾಚರಣೆಗೆ ಹೆಚ್ಚಿನ ಬಲ ನೀಡಲು ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಇದರಿಂದ ರೋಗಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.
ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ವೆನ್ಲಾಕ್ ಆಸ್ಪತ್ರೆಯ ಉನ್ನತೀಕರಣಕ್ಕೆ ಹಾಸಿಗೆ ಹಾಗೂ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ಅನುಮೋದನೆ ನೀಡಲಾಗಿದೆ. ದಕ್ಷಿಣ ಕನ್ನಡ ಹಾಗೂ ನೆರೆಯ ಹಲವು ಜಿಲ್ಲೆಗಳ ರೋಗಿಗಳು ಚಿಕಿತ್ಸೆಗೆ ಇಲ್ಲಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸುವ ಪ್ರಯತ್ನ ನಡೆದಿದೆ.
ವೆನ್ಲಾಕ್ ಆಸ್ಪತ್ರೆಯಲ್ಲಿ 905 ಹಾಸಿಗೆಗಳ ಸಾಮರ್ಥ್ಯವಿದ್ದರೂ, ಪ್ರಸ್ತುತ 1088 ಹಾಸಿಗೆಗಳು ಕಾರ್ಯಾಚರಿಸುತ್ತಿವೆ. ಈಗ ಹೆಚ್ಚುವರಿಯಾಗಿ 200 ಹಾಸಿಗೆಗಳನ್ನು ಕಲ್ಪಿಸಲಾಗುತ್ತಿದ್ದು, ಇದರಲ್ಲಿ 50 ಐಸಿಯು ಹಾಸಿಗೆಗಳು ಇರಲಿವೆ. ಈ 50 ಹಾಸಿಗೆಗಳಲ್ಲಿ 30 ವೆಂಟಿಲೇಟರ್ ಸೌಲಭ್ಯ ಹೊಂದಿರುವ ಹಾಸಿಗೆಗಳು ಹಾಗೂ 20 ಸ್ಟೆಪ್‌ಡೌನ್ ಹಾಸಿಗೆಗಳಾಗಿವೆ. ಇದರ ಜತೆಗೆ 10 ತುರ್ತು ಚಿಕಿತ್ಸಾ ಹಾಸಿಗೆಗಳು ಮತ್ತು 140 ಸಾಮಾನ್ಯ ವಾರ್ಡ್ ಹಾಸಿಗೆಗಳನ್ನು ಒದಗಿಸಲು ನಿರ್ಧರಿಸಲಾಗಿದೆ.
ಈಗಾಗಲೇ ನಿರ್ಮಾಣವಾಗಿರುವ ಕ್ರಿಟಿಕಲ್ ಕೇರ್ ಬ್ಲಾಕ್‌ನಲ್ಲಿ 50 ಹಾಸಿಗೆಗಳಿಗೆ ವ್ಯವಸ್ಥೆಯಾಗಲಿದೆ. ಎಂಆರ್‌ಪಿಎಲ್‌ನಿಂದ ನಿರ್ಮಾಣವಾಗಲಿರುವ ‘ಸೆಂಟ್ರಲ್ ಸ್ಟೆರೈಲ್ ಸಪ್ಲೈ ಡಿಪಾರ್ಟ್‌ಮೆಂಟ್’ (ಸಿಎಸ್‌ಎಸ್‌ಡಿ) ವಾರ್ಡ್‌ನಲ್ಲಿ 74 ಹಾಸಿಗೆಗಳು ಸೇರ್ಪಡೆಯಾಗಲಿವೆ. ಇದರೊಂದಿಗೆ ಆಸ್ಪತ್ರೆಯ ಒಟ್ಟು ಹಾಸಿಗೆಗಳ ಸಂಖ್ಯೆ 1212ಕ್ಕೆ ಏರಿಕೆಯಾಗಲಿದೆ.
ಆಸ್ಪತ್ರೆಗೆ ನೆರೆಯ 10-15 ಜಿಲ್ಲೆಗಳು ಹಾಗೂ ಕಾಸರಗೋಡು ಮತ್ತಿತರ ಪ್ರದೇಶಗಳಿಂದ ರೋಗಿಗಳು ಬರುತ್ತಿದ್ದು, ಇದು ಬಹುತೇಕ ಪ್ರಾದೇಶಿಕ ಆಸ್ಪತ್ರೆಯ ಮಾದರಿಯಲ್ಲಿ ಕಾರ್ಯಾಚರಿಸುತ್ತಿದೆ. ಮೂಳೆಶಾಸ್ತ್ರ ಸೇರಿದಂತೆ ಕೆಲವು ವಿಭಾಗಗಳಿಗೆ ಜಾಗದ ಕೊರತೆಯಿದೆ. ವಿಶೇಷವಾಗಿ ಜಿಲ್ಲೆಯ ರೋಗಿಗಳಿಗೆ ಐಸಿಯು ಹಾಗೂ ಇತರ ತುರ್ತು ಸೌಲಭ್ಯಗಳು ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹಾಸಿಗೆಗಳ ಸಂಖ್ಯೆಯನ್ನು 1500ಕ್ಕೆ ಹೆಚ್ಚಿಸಿ, ‘ವೆನ್ಲಾಕ್ ರೀಜನಲ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ’ಯಾಗಿ ಮೇಲ್ದರ್ಜೆಗೇರಿಸಬೇಕು ಎಂಬ ಬೇಡಿಕೆ ಇತ್ತು.



