ಮುಂಬೈ: ಭಾರತೀಯ ಚಿತ್ರರಂಗದ ಖ್ಯಾತ ಹಿರಿಯ ನಟ ನಾನಾ ಪಾಟೇಕರ್ (75) ಅವರು ಹೃದಯ ಸ್ತಂಭನದಿಂದ ಗುರುವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಗೋವಾದಲ್ಲಿರುವ ತಮ್ಮ ನಿವಾಸದಲ್ಲಿದ್ದ ವೇಳೆ ಬೆಳಗ್ಗೆ ಸುಮಾರು 5.20ಕ್ಕೆ ಅವರಿಗೆ ತೀವ್ರ ಹೃದಯ ಸ್ತಂಭನ ಉಂಟಾಗಿದೆ ಎಂದು ತಿಳಿದುಬಂದಿದೆ.
ತಕ್ಷಣ ವೈದ್ಯಕೀಯ ನೆರವು ಒದಗಿಸಲಾಗಿದ್ದು, ವೈದ್ಯರು ಸುಮಾರು 45 ನಿಮಿಷಗಳ ಕಾಲ ನಿರಂತರವಾಗಿ ಸಿಪಿಆರ್ (CPR) ನಡೆಸಿದರೂ ಯಾವುದೇ ಸ್ಪಂದನೆ ದೊರೆಯದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಮಣಿಪಾಲ್ ಆಸ್ಪತ್ರೆಯ ಆಂಕೊಲಾಜಿ ವಿಭಾಗದ ಮುಖ್ಯಸ್ಥ ಡಾ. ಶೇಖರ್ ಸಾಲ್ಕರ್ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಆಸ್ಪತ್ರೆ ವತಿಯಿಂದ ವೈದ್ಯಕೀಯ-ಕಾನೂನು ಪ್ರಕರಣ (MLC) ದಾಖಲಿಸಲಾಗಿದೆ. ಸಾವಿನ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.
ಹಿಂದಿ ಹಾಗೂ ಮರಾಠಿ ಚಿತ್ರರಂಗದಲ್ಲಿ ದಶಕಗಳ ಕಾಲ ಸಕ್ರಿಯರಾಗಿದ್ದ ನಾನಾ ಪಾಟೇಕರ್, ತಮ್ಮ ವಿಶಿಷ್ಟ ಸಂಭಾಷಣೆ ಶೈಲಿ, ಖಡಕ್ ಡೈಲಾಗ್ ಡೆಲಿವರಿ ಹಾಗೂ ತೀವ್ರತೆಯುಳ್ಳ ಅಭಿನಯದ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು. ‘ಪರಿಂಧಾ’, ‘ಕ್ರಾಂತಿವೀರ್’, ‘ಅಗ್ನಿಸಾಕ್ಷಿ’, ‘ತಿರಂಗಾ’, ‘ವೆಲ್ಕಮ್’, ‘ನಟಸಾಮ್ರಾಟ್’ ಸೇರಿದಂತೆ ಹಲವು ಯಶಸ್ವಿ ಚಿತ್ರಗಳಲ್ಲಿ ಅವರು ಗಮನಾರ್ಹ ಪಾತ್ರಗಳನ್ನು ನಿರ್ವಹಿಸಿದ್ದರು.



