ಬೆಂಗಳೂರು: ನಿಗೂಢ ನಾಪತ್ತೆ ಪ್ರಕರಣಗಳು, ಸರಣಿ ಕೊಲೆಗಳು ಹಾಗೂ ಅನಿರೀಕ್ಷಿತ ಘಟನೆಗಳ ರೋಚಕ ಕಥಾಹಂದರ ಹೊಂದಿರುವ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ‘ಅಮರಾವತಿ ಪೊಲೀಸ್ ಸ್ಟೇಷನ್’ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಧರ್ಮ ಕೀರ್ತಿರಾಜ್ ನಾಯಕನಾಗಿ ನಟಿಸಿರುವ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಕುತೂಹಲ ಮೂಡಿಸಿದೆ.
ಕಡಲ ತೀರದ ಕಾಲ್ಪನಿಕ ಊರಾದ ಅಮರಾವತಿಯಲ್ಲಿ ನಡೆಯುವ ವಿಚಿತ್ರ ಘಟನೆಗಳ ಸುತ್ತ ಚಿತ್ರದ ಕಥೆ ಸಾಗುತ್ತದೆ. ಊರಿನ ಗೌಡ ಏಕಾಏಕಿ ನಾಪತ್ತೆಯಾಗುತ್ತಾನೆ. ಪ್ರಕರಣದ ತನಿಖೆಗೆ ಆಗಮಿಸುವ ಪೊಲೀಸರೂ ನಿಗೂಢವಾಗಿ ಕಾಣೆಯಾಗುತ್ತಾರೆ. ಈ ಘಟನೆಗಳ ಹಿಂದಿನ ರಹಸ್ಯವನ್ನು ಭೇದಿಸಲು ಮಫ್ತಿ ಪೊಲೀಸ್ ಅಮರಾವತಿಗೆ ಆಗಮಿಸುತ್ತಾನೆ. ಅಲ್ಲಿಂದ ಕಥೆ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತದೆ.
ಪುನೀತ್ ಅರಸೀಕೆರೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಚಿತ್ರದ ಟ್ರೈಲರ್ನ್ನು ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಬಾಮಾ ಹರೀಶ್ ಹಾಗೂ ಹಿರಿಯ ಪ್ರಚಾರಕರ್ತ ನಾಗೇಂದ್ರ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಚಿತ್ರದಲ್ಲಿ ಅಮಾನತುಗೊಂಡ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿರುವ ಧರ್ಮ ಕೀರ್ತಿರಾಜ್, ನಿರ್ದೇಶಕರು ಸಿನಿಮಾ ಉತ್ತಮವಾಗಿ ಮೂಡಿಬರಬೇಕೆಂಬ ಉದ್ದೇಶದಿಂದ ಕೆಲವು ದೃಶ್ಯಗಳನ್ನು ಮರುಚಿತ್ರೀಕರಣ ಮಾಡಿದ್ದಾರೆ. ಹಲವು ಹೆಸರಾಂತ ಖಳನಟರು ಚಿತ್ರದಲ್ಲಿದ್ದು, ರೋಣದ ಬಕ್ಕೇಶ್ ಅವರ ಸಂಗೀತವೂ ವಿಶೇಷವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಟ ಗುರುರಾಜ್ ಜಗ್ಗೇಶ್ ಮಾತನಾಡಿ, ನಿರ್ದೇಶಕರು ಚಿತ್ರದ ಬಗ್ಗೆ ಅಪಾರ ವಿಶ್ವಾಸ ಹೊಂದಿದ್ದು, ಉತ್ತಮ ಸಿನಿಮಾ ನೀಡಲು ಸಾಕಷ್ಟು ಶ್ರಮಿಸಿದ್ದಾರೆ. ಚಿತ್ರದಲ್ಲಿ ನೆಗೆಟಿವ್ ಶೇಡ್ ಹೊಂದಿರುವ, ‘ಟಗರು ಡಾಲಿ’ ಮಾದರಿಯ ಕ್ರೂರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇದು ಸವಾಲಿನ ಅನುಭವ ನೀಡಿದೆ ಎಂದರು.
ಹಿರಿಯ ನಟ ಧರ್ಮ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದು, ಚಿತ್ರದ ಸಾಹಸ ದೃಶ್ಯಗಳು ವಿಶೇಷವಾಗಿವೆ. ನಾಯಕ ಧರ್ಮ ಕೀರ್ತಿರಾಜ್ ಸಾಹಸ ದೃಶ್ಯಗಳಿಗಾಗಿ ಸಾಕಷ್ಟು ಶ್ರಮ ಹಾಗೂ ರಿಸ್ಕ್ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು.
ಚಿತ್ರದ ನಾಯಕಿ ತೆಲುಗು ಮೂಲದ ವೇದ್ವಿಕಾ ಅವರಿಗೆ ಇದು ಮೊದಲ ಕನ್ನಡ ಚಿತ್ರವಾಗಿದೆ. ಗ್ರಾಮೀಣ ಹಿನ್ನೆಲೆಯ ಕಥೆಯನ್ನು ಹೊಂದಿರುವ ಚಿತ್ರದಲ್ಲಿ ಮನಾಲಿಯಲ್ಲಿ ಚಿತ್ರೀಕರಿಸಿದ ಯುಗಳ ಗೀತೆ ವಿಶೇಷವಾಗಿ ಮೂಡಿಬಂದಿದೆ ಎಂದು ಅವರು ಹೇಳಿದರು.
ನಿರ್ದೇಶಕ ಪುನೀತ್ ಅರಸೀಕೆರೆ ಮಾತನಾಡಿ, ಚಿತ್ರದಲ್ಲಿ ರೈತರ ಬದುಕಿನ ಜೊತೆಗೆ ಕೃತಕ ಆಹಾರದಿಂದ ಜನರ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆಯೂ ಸಂದೇಶ ನೀಡಲಾಗಿದೆ. ಮಾಳವಿಕಾ ಅವಿನಾಶ್ ಪೊಲೀಸ್ ಕಮಿಷನರ್ ಪಾತ್ರದಲ್ಲಿ ನಟಿಸಿದ್ದು, ಒಟ್ಟು 29 ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸಿನಿಮಾ ಉತ್ತಮವಾಗಿ ಮೂಡಿಬಂದಿದ್ದು, ಡಿಸೆಂಬರ್ನಲ್ಲಿ ಬಿಡುಗಡೆ ಮಾಡುವ ಯೋಜನೆ ಇದೆ ಎಂದು ತಿಳಿಸಿದರು.
ಖಳನಟರಾದ ಕಾಕ್ರೋಚ್ ಸುಧಿ ಹಾಗೂ ಡ್ರಾಗನ್ ಮಂಜು ಕೂಡ ತಮ್ಮ ಪಾತ್ರಗಳ ಕುರಿತು ಅನಿಸಿಕೆ ಹಂಚಿಕೊಂಡರು.
ಯುವ ಪವರ್ ಪಿಕ್ಚರ್ಸ್ ಲಾಂಛನದಲ್ಲಿ ಪವರ್ ಪಿಕ್ಚರ್ ಹಾಗೂ ಎನ್. ಅನಿತಾ ಸುಕೇಂದ್ರ ಚಿತ್ರವನ್ನು ನಿರ್ಮಿಸಿದ್ದಾರೆ. ಕೆ.ಆರ್. ಪ್ರದೀಪ್ ಕಮಲಾಪುರ ಮತ್ತು ಗೀತಾ ಅಂಜನರೆಡ್ಡಿ ಸಹ ನಿರ್ಮಾಪಕರಾಗಿದ್ದಾರೆ.
ಚಿತ್ರದಲ್ಲಿ ಸಾಧು ಕೋಕಿಲ, ಮಾಳವಿಕಾ ಅವಿನಾಶ್, ನಾಗೇಂದ್ರ ಪ್ರಸಾದ್, ಧರ್ಮಣ್ಣ ಕಡೂರು ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ನಾಲ್ಕು ಹಾಡುಗಳಿಗೆ ರೋಣದ ಬಕ್ಕೇಶ್ ಸಂಗೀತ ಸಂಯೋಜಿಸಿದ್ದು, ಗೌತಮ್ ಮಟ್ಟಿ ಛಾಯಾಗ್ರಹಣ ಹಾಗೂ ದೀಪು ಸಂಕಲನದ ಜವಾಬ್ದಾರಿ ನಿರ್ವಹಿಸಿದ್ದಾರೆ. ಡಿಫರೆಂಟ್ ಡ್ಯಾನಿ ಮತ್ತು ಅಲ್ಟಿಮೇಟ್ ಶಿವು ಸಾಹಸ ನಿರ್ದೇಶನ ಮಾಡಿದ್ದಾರೆ.




