ಅಮೃತ ಸೋಮೇಶ್ವರರ ‘ತಂಬಿಲ’
ಲೇಖಕರು: ರಘು ಇಡ್ಕಿದು
ಅಮೃತ ಸೋಮೇಶ್ವರರು ನಮ್ಮ ನಾಡು ಕಂಡ ತುಳು ಮತ್ತು ಕನ್ನಡದ ಬಹುದೊಡ್ಡ ವಿದ್ವಾಂಸರು. ಅವರು ನನಗೆ ಬಹುಮುಖ್ಯ ಸ್ಫೂರ್ತಿ ಮತ್ತು ಪ್ರೇರಣೆ. ನಾನು ಮೆಚ್ಚಿದ ಮಹಾನ್ ಗುರುಗಳಲ್ಲಿ ಅವರೂ ಒಬ್ಬರು. ಪದವಿ ಹಾಗೂ ಸ್ನಾತಕೋತ್ತರ ಪದವಿಯ ಅವಧಿಯಲ್ಲಿ ತರಗತಿಗಳಲ್ಲಿ ಅವರು ನೀಡುತ್ತಿದ್ದ ಪಾಠಗಳು ನನಗೆ ಚೇತೋಹಾರಿಯಾಗಿದ್ದವು. ಅವರ ಆತ್ಮೀಯತೆ, ಪ್ರೀತಿ ಮತ್ತು ವಿಶ್ವಾಸ ದೊಡ್ಡದು. ವಿದ್ಯಾರ್ಥಿಯಾಗಿದ್ದಾಗ ಅವರ ಕವನ–ಕಥೆಗಳ ಪುಸ್ತಕಗಳನ್ನು ನೀಡಿ ಓದುವಂತೆ ಹೇಳುತ್ತಿದ್ದರು. ಅವರ ‘ತಂಬಿಲ’ ತುಳು ಕವನ ಸಂಕಲನವನ್ನೂ ನನಗೆ ನೀಡಿದ್ದರು.
ಆಗ ವಿದ್ಯಾರ್ಥಿಯಾಗಿದ್ದ ನಾನು ಆ ಕೃತಿಯನ್ನು ಓದಿ, ಅದರ ಪರಿಚಯವನ್ನು ಕಾಲೇಜಿನ (ವಿವೇಕಾನಂದ ಕಾಲೇಜು, ಪುತ್ತೂರು) ಭಿತ್ತಿಪತ್ರಿಕೆಗಾಗಿ ಬರೆದಿದ್ದೆ. ಆ ಬರಹವನ್ನು ಈ ಕೃತಿಯಲ್ಲಿ ಪ್ರಕಟಿಸಲು ನನಗೆ ಅತೀವ ಸಂತೋಷವಾಗುತ್ತಿದೆ.
‘ತಂಬಿಲ’ ಅಮೃತ ಸೋಮೇಶ್ವರರು ಬರೆದ ತುಳು ಕವನ ಸಂಕಲನ. 1984ರಲ್ಲಿ ಪ್ರಕಟವಾದ ಇದು ಅಮೃತರ ಮೊದಲ ತುಳು ಕವನ ಸಂಕಲನ. ಅಮೃತರು ಈ ಸಂಕಲನದಲ್ಲಿ ಅತ್ಯುತ್ತಮವಾದ ತುಳು ಕವನಗಳನ್ನು ರಚಿಸಿದ್ದಾರೆ. ಬಹಳ ಸುಂದರವಾದ ತುಳು ಶಬ್ದಗಳು ಮತ್ತು ಮಾತುಗಳಿಂದ ಕೂಡಿರುವ ಈ ಕವನಗಳನ್ನು ಓದಿದಷ್ಟೂ ಮತ್ತೆ ಮತ್ತೆ ಓದಬೇಕೆಂಬ ಆಸೆ ಮೂಡುತ್ತದೆ.
ಈ ಸಂಕಲನದಲ್ಲಿ ಒಟ್ಟು 28 ಕವನಗಳಿವೆ. ಹೆಚ್ಚಿನ ಕವನಗಳನ್ನು ರಾಗ ಸಂಯೋಜಿಸಿ ಹಾಡಬಹುದು. ಇನ್ನು ಕೆಲವು ಕವನಗಳು ಓದುವುದಕ್ಕೆ ಅನುಕೂಲವಾಗುವಂತಿವೆ.
‘ತಂಬಿಲ’ ಎಂಬ ಕವನದಲ್ಲಿ ಅಮೃತರು, ತಾವು ಮೂವರು ತಾಯಂದಿರ ಮಗ ಎಂದು ಹೇಳುತ್ತಾರೆ. ಮಲಯಾಳಂ ತಾಯಿ ಹೆತ್ತ ತಾಯಿಯಾದರೆ, ತುಳು ತಾಯಿ ಪ್ರೀತಿಯಿಂದ ಎತ್ತಿಕೊಂಡವಳು; ಕನ್ನಡ ತಾಯಿ ಬದುಕಿಗೆ ಬೆಳಕನ್ನು ತೋರಿಸಿ ಮುತ್ತನ್ನು ನೀಡಿದವಳು ಎಂಬ ಭಾವವನ್ನು ವ್ಯಕ್ತಪಡಿಸುತ್ತಾರೆ. ಹೀಗೆ ಮೂರು ಭಾಷೆಗಳ ಒಡನಾಟದಲ್ಲಿ ಬೆಳೆದ ಸಂತೋಷವನ್ನು ಈ ಕವನದಲ್ಲಿ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.
‘ಮುಸುಕು ದೆತ್ತ್ದ್ ದಕ್ಕ್’ ಎಂಬ ಕವನದಲ್ಲಿ ನಮ್ಮೊಳಗಿರುವ ಜಡತ್ವವನ್ನು ಬಿಟ್ಟು ಎದ್ದು ನಿಲ್ಲಬೇಕು; ಆಗ ನಮ್ಮ ಬದುಕು ಸುಂದರವಾಗುತ್ತದೆ ಎಂಬ ಸಂದೇಶವಿದೆ. ಕಷ್ಟ–ನಷ್ಟಗಳನ್ನು ಮೆಟ್ಟಿ ನಿಂತು ಬದುಕಿನಲ್ಲಿ ಹೊಸ ಚೈತನ್ಯದ ಉಸಿರನ್ನು ತುಂಬಿಕೊಳ್ಳಬೇಕು ಎಂದು ಕವಿ ಹೇಳುತ್ತಾರೆ.
‘ಕುಡ್ತಲ್ಕ್ಕ್’ ಎಂಬ ಕವನದಲ್ಲಿ ಉಳ್ಳಾಯನಿಗೆ, ಅಂದರೆ ಧಣಿಗೆ, ನಮಸ್ಕಾರ ಹಾಕಿ ಒಕ್ಕಲಿನ ಬದುಕು ಹಾಳಾದದ್ದು ಸಾಕು; ಒಕ್ಕಲಿನವನೇ, ಎದ್ದು ನಿಲ್ಲು, ನಿನ್ನ ಸುಂದರ ಬದುಕನ್ನು ನೀನೇ ಕಂಡುಕೊಳ್ಳಬೇಕು ಎಂದು ಖಾರವಾಗಿ ನುಡಿಯುತ್ತಾರೆ. ಈ ಕವನ ಧಣಿ ಮತ್ತು ಒಕ್ಕಲಿನವರ ನಡುವಿನ ಸಂಬಂಧವನ್ನು ಚಿತ್ರಿಸುವುದರ ಜೊತೆಗೆ, ಧಣಿಯ ಶೋಷಣೆಯ ವಿರುದ್ಧ ಎದ್ದು ನಿಲ್ಲುವಂತೆ ಪ್ರೇರೇಪಿಸುತ್ತದೆ.
‘ಪಗಲ್ ಮೈಲಿಗೆ’ ಎಂಬ ಕವನ ಬಹಳ ಮಾರ್ಮಿಕವಾಗಿದೆ. ಕೆಳಜಾತಿಯ ಹೆಣ್ಣೊಬ್ಬಳು ದೇವಸ್ಥಾನದೊಳಗೆ ಬಂದಾಗ ಮೈಲಿಗೆಯಾಗುತ್ತಾಳೆ; ಆದರೆ ರಾತ್ರಿ ಅದೇ ಹೆಣ್ಣನ್ನು ಮಲ್ಲಿಗೆ ಎಂದು ಭಾವಿಸಿ ತನ್ನ ಕಾಮದಾಟಕ್ಕೆ ಬಳಸಿಕೊಳ್ಳುವ ದೇವಸ್ಥಾನದ ಪೂಜಾರಿ ಮಾತ್ರ ಮೈಲಿಗೆಯಾಗುವುದಿಲ್ಲವೇ? ಎಂಬ ಪ್ರಶ್ನೆಯನ್ನು ಕವಿ ಎತ್ತುತ್ತಾರೆ. ಸಮಾಜದಲ್ಲಿರುವ ಜಾತಿ ತಾರತಮ್ಯ ಮತ್ತು ದ್ವಂದ್ವ ನೀತಿಯನ್ನು ಈ ಕವನ ಪರಿಣಾಮಕಾರಿಯಾಗಿ ಪ್ರಶ್ನಿಸುತ್ತದೆ.
‘ಕಾರ್ತೆಲ್ದ ದಿಬ್ಬಣ’ ಕವನವು ಮಳೆಗಾಲದ ಸುಂದರ ಪ್ರಕೃತಿಯನ್ನು ವರ್ಣಿಸುತ್ತದೆ. ಮಳೆ ಬರುವ ಸಂಭ್ರಮವನ್ನು ಅಮೃತರು ಆಕಾಶದ ದಿಬ್ಬಣದ ರೂಪದಲ್ಲಿ ಚಿತ್ರಿಸಿದ್ದಾರೆ. ಆಕಾಶದ ಈ ದಿಬ್ಬಣ ಬಂದು ಭೂಮಿ ಎಂಬ ಹೆಣ್ಣನ್ನು ಸೇರುತ್ತದೆ ಎಂಬ ಕಲ್ಪನೆ ಅತ್ಯಂತ ಸೊಗಸಾಗಿದೆ.
‘ಆ ಪುರಪ್ಪ ಕೊಯೊಡ್ಡಿ’ ಕವನದಲ್ಲಿ ಆ ಹೂವನ್ನು ಕೀಳದಿರು ಹೆಣ್ಣೇ, ಅದೂ ನಿನ್ನಂತೆಯೇ ಈ ಲೋಕದ ಕಣ್ಣಾಗಿದೆ ಎಂಬ ಭಾವ ವ್ಯಕ್ತವಾಗುತ್ತದೆ. ಆ ಹೂವಿಗೂ ಕನಸುಗಳಿವೆ; ಅದು ಯಾವ ದುಂಬಿಗಾಗಿ ಕಾಯುತ್ತಿದೆಯೋ ಎಂಬ ಪ್ರಶ್ನೆಯ ಮೂಲಕ ಹೂವಿಗೂ ಮನುಷ್ಯರಂತೆಯೇ ಭಾವನೆಗಳಿವೆ ಎಂಬ ಅರ್ಥವನ್ನು ಕವಿ ನೀಡುತ್ತಾರೆ.
‘ಜಾತ್ರೆದಾನಿದ ನೆನಪು’ ಎಂಬ ಕವನ ಬಹಳ ಮನಮೋಹಕವಾಗಿದೆ. ಗಂಡ–ಹೆಂಡತಿ ಪರಸ್ಪರ ಮಾತನಾಡಿಕೊಳ್ಳುವಂತೆ ಸಾಗುವ ಈ ಕವನದಲ್ಲಿ, ಮದುವೆಯಾಗಿ ಹಲವು ವರ್ಷಗಳ ನಂತರ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುವ ದಂಪತಿಯ ಚಿತ್ರಣವಿದೆ. ಊರ ಜಾತ್ರೆಯ ದಿನ ಅವಳನ್ನು ಕಂಡು ಮರುಳಾದದ್ದು, ಆಕೆಗೆ ಮಲ್ಲಿಗೆ ತೆಗೆದುಕೊಡಲು ಹೂವಿನ ಅಂಗಡಿಗೆ ಹೋಗಿ ಬೆಲೆ ಕೇಳಿದ್ದು, ಕಡಿಮೆ ಬೆಲೆಗೆ ಕೇಳಿದಾಗ ಉಂಟಾದ ಪ್ರಸಂಗ, ಸಂತೆಯಲ್ಲಿ ನಿಂತಿದ್ದಾಗ ಅವಳು ಬಂದು ಬಳೆಗಳ ಸದ್ದು ಮಾಡಿದ್ದು, ತೇರು ಎಳೆಯುವಾಗ ಆತ ಜಾರಿ ಬಿದ್ದದ್ದನ್ನು ನೋಡಿ ಅವಳು ನಕ್ಕಿದ್ದು—ಹೀಗೆ ಹಳೆಯ ನೆನಪುಗಳನ್ನು ದಂಪತಿ ಮೆಲುಕು ಹಾಕುವ ಸುಂದರ ಸಾಂಸಾರಿಕ ಕವನವಿದು.
ಇಷ್ಟೇ ಅಲ್ಲದೆ, ‘ತುಳುನಾಡ ತುಡರ್’, ‘ಚಿಲ್ಲರೆ ಜನೊ’, ‘ಒಂಜಿ ಜಾಹೀರಾತ್’, ‘ತುಳುವಪ್ಪೆನ ಎತೆ’, ‘ರಾಷ್ಟ್ರ ಕವಿನ್ ಇಲ್ಲ್’, ‘ಬಿತ್ತಿಲ್ದಬೂರು’ ಮುಂತಾದ ಇನ್ನೂ ಕೆಲವು ಕವನಗಳು ಉತ್ತಮ ವಿಚಾರಗಳಿಂದ ಕೂಡಿವೆ. ಇವು ತುಳು ಭಾಷೆಯ ಬಗ್ಗೆ ಮತ್ತು ತುಳು ಪದ್ಯಗಳ ಬಗ್ಗೆ ಓದುಗರಲ್ಲಿ ವಿಶೇಷ ಆಸಕ್ತಿಯನ್ನು ಬೆಳೆಸುವಂತಿವೆ.
ಅಮೃತ ಸೋಮೇಶ್ವರ ಅವರ ‘ಜಾತ್ರೆದಾನಿದ ನೆನಪು’ ಹಾಡಿಗೆ ಹೊಸ ರೂಪ
ಖ್ಯಾತ ಸಾಹಿತಿ ಅಮೃತ ಸೋಮೇಶ್ವರ ಅವರ ‘ಜಾತ್ರೆದಾನಿದ ನೆನಪು’ ಎಂಬ ಜನಪ್ರಿಯ ಹಾಡು ಇದೀಗ ಹೊಸ ಸಂಗೀತ ಸಂಯೋಜನೆಯೊಂದಿಗೆ ಮತ್ತೆ ಕೇಳುಗರ ಮುಂದೆ ಬರಲು ಸಿದ್ಧವಾಗಿದೆ. ಈ ಹಿಂದೆ ಕ್ಯಾಸೆಟ್ ರೂಪದಲ್ಲಿ ಬಿಡುಗಡೆಯಾಗಿ ಜನಪ್ರಿಯತೆ ಗಳಿಸಿದ್ದ ಈ ಹಾಡು ಪ್ರಸ್ತುತ ಸುಲಭವಾಗಿ ಲಭ್ಯವಿಲ್ಲದ ಹಿನ್ನೆಲೆಯಲ್ಲಿ, ಹೊಸ ರೂಪದಲ್ಲಿ ಮರುಸೃಷ್ಟಿಸಲಾಗಿದೆ.



