ಮಂಗಳೂರು: ಅನೈರ್ಮಲ್ಯ ಪರಿಸ್ಥಿತಿಯಲ್ಲಿ ಚೀಸ್ ಬಾಲ್ ಸ್ನ್ಯಾಕ್ಸ್ ತಯಾರಿಸುತ್ತಿದ್ದ ಬೈಕಂಪಾಡಿ ಕೈಗಾರಿಕಾ ಪ್ರದೇಶದ ಫಾರ್ಚುನ್ ಇಂಡಸ್ಟ್ರೀಸ್ ಘಟಕಕ್ಕೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಸೋಮವಾರ ಬೀಗ ಜಡಿದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಅವರ ನೇತೃತ್ವದಲ್ಲಿ ಐದು ತಂಡಗಳು ಬೆಳಗ್ಗಿನಿಂದಲೇ ಜಿಲ್ಲೆಯ ವಿವಿಧೆಡೆ ತಪಾಸಣೆ ನಡೆಸಿದವು. ಈ ವೇಳೆ ಬೈಕಂಪಾಡಿಯ ಫಾರ್ಚುನ್ ಇಂಡಸ್ಟ್ರೀಸ್ ಘಟಕದಲ್ಲಿ ಹಲವು ಬಾರಿ ಬಳಸಿದ್ದ ಕಪ್ಪು ಬಣ್ಣದ ಎಣ್ಣೆಯನ್ನೇ ತಿಂಡಿ ಕರಿಯಲು ಬಳಸುತ್ತಿರುವುದು ಪತ್ತೆಯಾಗಿದೆ.
ಅಲ್ಲದೆ, ತಿಂಡಿ ತಯಾರಿಕಾ ಸಾಮಗ್ರಿಗಳನ್ನು ಕಸದ ಬುಟ್ಟಿಯ ಸಮೀಪ ಸಂಗ್ರಹಿಸಿಟ್ಟಿರುವುದು ಹಾಗೂ ಘಟಕದೊಳಗೆ ಹೆಗ್ಗಣಗಳು ಓಡಾಡುತ್ತಿರುವುದನ್ನು ಅಧಿಕಾರಿಗಳು ಗಮನಿಸಿದ್ದಾರೆ.
ಘಟಕದಲ್ಲಿ ತೀವ್ರ ಅನೈರ್ಮಲ್ಯ ಕಂಡುಬಂದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳ ತಂಡ ಉತ್ಪಾದನಾ ಘಟಕಕ್ಕೆ ಬೀಗ ಜಡಿದು ಸೀಲ್ ಮಾಡಿದೆ.



