ಮಂಗಳೂರು: ರೋಟರಿ ಮಂಗಳೂರು ಸೆಂಟ್ರಲ್ ಮತ್ತು ರೋಟರ್ಯಾಕ್ಟ್ ಮಂಗಳೂರು ಸಿಟಿ ಸಂಯುಕ್ತ ಆಶ್ರಯದಲ್ಲಿ 26ನೇ ವಾರ್ಷಿಕ ರೋಟರಿ ಚಿಣ್ಣರ ಉತ್ಸವ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧಾಕೂಟ ನವೆಂಬರ್ 22ರಂದು ಉರ್ವದ ಕೆನರಾ ಹೈಸ್ಕೂಲ್ನಲ್ಲಿ ನಡೆಯಲಿದೆ.
ಅಂದು ಬೆಳಗ್ಗೆ 9 ಗಂಟೆಗೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಮಾಜಿ ಸಹಾಯಕ ಗವರ್ನರ್ ರಾಜೇಶ್ ಶೆಟ್ಟಿ ಗೌರವ ಅತಿಥಿಯಾಗಿ ಭಾಗವಹಿಸಲಿದ್ದು, ರೋಟರಿ ಮಂಗಳೂರು ಸೆಂಟ್ರಲ್ ಅಧ್ಯಕ್ಷ ಬಿ.ಎನ್.ಇ.ಆರ್. ರವೀಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಕುರಿತು ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಉತ್ಸವದ ಅಧ್ಯಕ್ಷರು ಹಾಗೂ ಪಿಡಿಜಿ ಎಂಡಿ ಡಾ. ಬಿ. ದೇವದಾಸ್ ರೈ, ಜಿಲ್ಲೆಯ 10 ಮಕ್ಕಳ ರಕ್ಷಣೆ ಮತ್ತು ಆರೈಕೆ ಕೇಂದ್ರಗಳ ಸುಮಾರು 434 ವಿದ್ಯಾರ್ಥಿಗಳು ಕ್ರೀಡಾ, ಮನರಂಜನಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಮಾಜಿ ಗವರ್ನರ್ ಎಂ.ಡಿ. ಪ್ರಕಾಶ್ ಕಾರಂತ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ರೋಟರಿ ಮಂಗಳೂರು ಸೆಂಟ್ರಲ್ ಅಧ್ಯಕ್ಷ ಬಿ.ಎನ್.ಇ.ಆರ್. ರವೀಂದ್ರ, ಕಾರ್ಯದರ್ಶಿ ಜಾಕ್ಸನ್ ಸಲ್ದಾನ, ಭಾಸ್ಕರ ರೈ ಕಟ್ಟ, ರೋಟರ್ಯಾಕ್ಟ್ನ ಹರ್ಷ, ರಕ್ಷಣ್ ಹಾಗೂ ವಸಂತ ಮಲ್ಯ ಉಪಸ್ಥಿತರಿದ್ದರು.




