ಮಂಗಳೂರು: ಕಾರ್ಮೆಲ್ ಸಿಬಿಎಸ್ಇ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ವಿಯಾ ಸಾಯಿ ರಚಿಸಿರುವ ಚೊಚ್ಚಲ ಕವನ ಸಂಕಲನ ‘ವೇರ್ ಮೈ ವರ್ಡ್ಸ್ ಬಿಗಿನ್’ (Where My Words Begin) ನಗರದ ಇಎಲ್ಸಿ ಕ್ಯಾಂಪಸ್ನಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಬಿಡುಗಡೆಯಾಯಿತು.
ಸೆಂಟರ್ ಫಾರ್ ಇಂಟಿಗ್ರೇಟೆಡ್ ಲರ್ನಿಂಗ್ ಸಂಸ್ಥೆ ಹಾಗೂ ನಗರದ ಮೊದಲ ಮಕ್ಕಳ ಪುಸ್ತಕ ಕ್ಲಬ್ ‘ಬುಕ್ಹಾಲಿಕ್ಸ್ ಜೂನಿಯರ್’ ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿದ್ದವು.
ಪುಸ್ತಕ ಬಿಡುಗಡೆಗೊಳಿಸಿದ ಕಾರ್ಮೆಲ್ ಸಿಬಿಎಸ್ಇ ಶಾಲೆಯ ಪ್ರಾಂಶುಪಾಲೆ ಸಿಸ್ಟರ್ ರೋಸ್ವೀರಾ ಮಾತನಾಡಿ, ಡಿಜಿಟಲ್ ಯುಗದಲ್ಲಿ ಮಕ್ಕಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ವಿಯಾ ಸಾಯಿಯಂತಹ ಪುಟ್ಟ ಪ್ರತಿಭೆಗಳು ಪುಸ್ತಕ ಪ್ರಕಟಿಸುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು. ಸಾಹಿತ್ಯದ ಜೊತೆಗೆ ಫ್ಯಾಷನ್ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿಯೂ ವಿಯಾ ತೊಡಗಿಸಿಕೊಂಡಿರುವುದನ್ನು ಶ್ಲಾಘಿಸಿದರು.
ಹಿರಿಯ ಪತ್ರಕರ್ತ ಶ್ರೀನಿವಾಸನ್ ನಂದಗೋಪಾಲ್ ಮಾತನಾಡಿ, ಮಕ್ಕಳು ತಮ್ಮ ಕಲ್ಪನೆಗಳಿಗೆ ಮಿತಿಯಿಲ್ಲದೆ ರೆಕ್ಕೆ ನೀಡಿ, ಅವುಗಳನ್ನು ಬರಹದ ಮೂಲಕ ಅಭಿವ್ಯಕ್ತಪಡಿಸಬೇಕು. ಓದುವಿಕೆ ಬಾಲ್ಯದಿಂದಲೇ ಜೀವನದ ಭಾಗವಾಗಬೇಕು. ಪುಸ್ತಕ ಓದುವ ಹವ್ಯಾಸ ಬರವಣಿಗೆಯ ಆಸಕ್ತಿಯನ್ನೂ ಬೆಳೆಸುತ್ತದೆ ಎಂದರು. ಮಕ್ಕಳ ಸಾಹಿತ್ಯ ಪ್ರತಿಭೆಗೆ ಆನ್ಲೈನ್ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ವಿಪುಲ ಅವಕಾಶಗಳಿವೆ ಎಂದು ತಿಳಿಸಿದರು.
ಸೆಂಟರ್ ಫಾರ್ ಇಂಟಿಗ್ರೇಟೆಡ್ ಲರ್ನಿಂಗ್ ಸಂಸ್ಥೆಯು ಕಳೆದ 17 ವರ್ಷಗಳಿಂದ ಮಕ್ಕಳ ಪ್ರತಿಭೆ ಗುರುತಿಸಿ, ಅವರ ವ್ಯಕ್ತಿತ್ವ ವಿಕಸನಕ್ಕೆ ಶ್ರಮಿಸುತ್ತಿದೆ ಎಂದರು.
ತಮ್ಮ ಮೊದಲ ಕವನ ಸಂಕಲನ ಬಿಡುಗಡೆಯಾದ ಬಗ್ಗೆ ಸಂತಸ ವ್ಯಕ್ತಪಡಿಸಿದ ವಿಯಾ ಸಾಯಿ, ಮುಂದಿನ ದಿನಗಳಲ್ಲಿ ಕವನಗಳ ಜೊತೆಗೆ ಗದ್ಯ ಸಾಹಿತ್ಯವನ್ನೂ ರಚಿಸಿ ಮತ್ತಷ್ಟು ಪುಸ್ತಕಗಳನ್ನು ಪ್ರಕಟಿಸುವ ಆಶಯ ವ್ಯಕ್ತಪಡಿಸಿದರು. ಅವರ ಕವನ ಸಂಕಲನವನ್ನು ‘ಬುಕ್ ಲೀಫ್ ಪಬ್ಲಿಷಿಂಗ್’ ಆನ್ಲೈನ್ ವೇದಿಕೆಯ ಮೂಲಕ ಪ್ರಕಟಿಸಲಾಗಿದೆ. ಸಾಹಿತ್ಯ ಸಾಧನೆಗಾಗಿ ವಿಯಾ ಅವರು ಪ್ರತಿಷ್ಠಿತ ‘21ನೇ ಶತಮಾನದ ಎಮಿಲಿ ಡಿಕಿನ್ಸನ್ ಪ್ರಶಸ್ತಿ’ಯನ್ನೂ ಪಡೆದಿದ್ದಾರೆ.
ಕಾರ್ಯಕ್ರಮದಲ್ಲಿ ಸೆಂಟರ್ ಫಾರ್ ಇಂಟಿಗ್ರೇಟೆಡ್ ಲರ್ನಿಂಗ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ಸಚಿತಾ ನಂದಗೋಪಾಲ್, ವಿಯಾಳ ಪೋಷಕರಾದ ಭವ್ಯಾ ಮತ್ತು ಭರತ್ ಉಪಸ್ಥಿತರಿದ್ದರು.
ಬುಕ್ಹಾಲಿಕ್ಸ್ ಜೂನಿಯರ್ ಮುಖ್ಯ ಕ್ಯುರೇಟರ್ ಪ್ರಕೃತಿ ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ಅಭಯ್ ಕಾರ್ತಿಕ್ ಸ್ವಾಗತಿಸಿ, ದ್ರವಿನ್ ವಂದಿಸಿದರು.
Previous Article
ಬ್ರಹ್ಮರಕೂಟ್ಲು ಟೋಲ್ಗೇಟ್ ತೆರವಿಗೆ ಆಗ್ರಹಿಸಿ 24 ಗಂಟೆಗಳ ಧರಣಿ
ಬ್ರಹ್ಮರಕೂಟ್ಲು ಟೋಲ್ಗೇಟ್ ತೆರವಿಗೆ ಆಗ್ರಹಿಸಿ 24 ಗಂಟೆಗಳ ಧರಣಿ

