ನವದೆಹಲಿ : 2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ಬಿಲ್ಕಿಸ್ ಬಾನು ಅವರ ಸಾಮೂಹಿಕ ಅತ್ಯಾಚಾರ ಹಾಗೂ ಅವರ ಕುಟುಂಬದ ಏಳು ಸದಸ್ಯರ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಇಬ್ಬರು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಅಲ್ಲದೆ, ಅವರ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಪ್ರಸನ್ನ ಬಿ. ವರಾಳೆ ಅವರನ್ನೊಳಗೊಂಡ ಪೀಠವು ಅಕ್ಟೋಬರ್ 28ರಂದು ಈ ಆದೇಶ ನೀಡಿದ್ದು, ಇದೀಗ ಆದೇಶದ ವಿವರ ಸಾರ್ವಜನಿಕವಾಗಿದೆ.
ಬಿಪಿನ್ಚಂದ್ರ ಕನ್ಹಯ್ಯಲಾಲ್ ಜೋಶಿ ಮತ್ತು ಪ್ರದೀಪ್ ರಾಮನಲಾಲ್ ಮೊಧಿಯಾ ಜಾಮೀನು ಪಡೆದ ಇಬ್ಬರು ಅಪರಾಧಿಗಳು. ಇವರು ಈಗಾಗಲೇ 17 ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದಿದ್ದಾರೆ. ಅಲ್ಲದೆ, ಇವರಲ್ಲಿ ಒಬ್ಬರು ತೀವ್ರ ದೈಹಿಕ ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ. ಪ್ರಕರಣದ ಮೇಲ್ಮನವಿಯಲ್ಲಿ ಇನ್ನೂ ಕೆಲವು ಕಾನೂನು ಮತ್ತು ವಾಸ್ತವಾಂಶಗಳ ವಿಚಾರಣೆ ಬಾಕಿಯಿದೆ ಎಂಬುದನ್ನು ನ್ಯಾಯಾಲಯ ಪರಿಗಣಿಸಿದೆ.
ಇಬ್ಬರ ಮೇಲ್ಮನವಿಗಳ ವಿಚಾರಣೆ ಪೂರ್ಣಗೊಳ್ಳುವವರೆಗೆ ಶಿಕ್ಷೆಯನ್ನು ಅಮಾನತುಗೊಳಿಸಿ, ವಿಚಾರಣಾ ನ್ಯಾಯಾಲಯ ವಿಧಿಸುವ ಷರತ್ತುಗಳಿಗೆ ಒಳಪಟ್ಟು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಜಾಮೀನಿಗೆ ಸರ್ಕಾರದ ವಿರೋಧ
ಅಪರಾಧಿಗಳ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಅವರು, ಇಬ್ಬರೂ 17 ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಅಲ್ಲದೆ, ಆರೋಪಿಗಳಲ್ಲಿ ಒಬ್ಬರ ಹೆಸರು ಆರಂಭಿಕ ಎಫ್ಐಆರ್ನಲ್ಲಿ ಇರಲಿಲ್ಲ ಮತ್ತು ಘಟನೆಯ ಸುಮಾರು ಮೂರು ವರ್ಷಗಳ ಬಳಿಕ ಅವರನ್ನು ಪ್ರಕರಣದಲ್ಲಿ ಸೇರಿಸಲಾಗಿತ್ತು ಎಂದು ವಾದಿಸಿದ್ದರು.
ಆದರೆ, ಕೇಂದ್ರ ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ರಾಜಾ ಠಾಕ್ರೆ ಅವರು ಜಾಮೀನು ಅರ್ಜಿಯನ್ನು ತೀವ್ರವಾಗಿ ವಿರೋಧಿಸಿದ್ದರು. ಅಪರಾಧದ ಗಂಭೀರತೆ ಹಾಗೂ ವಿಚಾರಣಾ ನ್ಯಾಯಾಲಯ ಮತ್ತು ಬಾಂಬೆ ಹೈಕೋರ್ಟ್ ನೀಡಿರುವ ತೀರ್ಪುಗಳನ್ನು ಪರಿಗಣಿಸಬೇಕೆಂದು ವಾದಿಸಿದ್ದರು.
2024ರಲ್ಲಿ 11 ಅಪರಾಧಿಗಳ ಬಿಡುಗಡೆ ರದ್ದು
2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ಐದು ತಿಂಗಳ ಗರ್ಭಿಣಿಯಾಗಿದ್ದ 21 ವರ್ಷದ ಬಿಲ್ಕಿಸ್ ಬಾನು ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಅವರ ಮೂರು ವರ್ಷದ ಮಗಳು ಸೇರಿದಂತೆ ಕುಟುಂಬದ ಏಳು ಸದಸ್ಯರನ್ನು ಹತ್ಯೆ ಮಾಡಲಾಗಿತ್ತು.
ಈ ಪ್ರಕರಣದಲ್ಲಿ 11 ಮಂದಿ ಅಪರಾಧಿಗಳಿಗೆ ಗುಜರಾತ್ ಸರ್ಕಾರ 2022ರ ಆಗಸ್ಟ್ನಲ್ಲಿ ಅವಧಿಪೂರ್ವ ಬಿಡುಗಡೆ ನೀಡಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, 2024ರ ಜನವರಿ 8ರಂದು ಸರ್ಕಾರದ ಬಿಡುಗಡೆ ಆದೇಶವನ್ನು ರದ್ದುಗೊಳಿಸಿತ್ತು. ಇದೀಗ ಜಾಮೀನು ಪಡೆದಿರುವ ಇಬ್ಬರೂ ಆ 11 ಅಪರಾಧಿಗಳಲ್ಲಿ ಸೇರಿದ್ದಾರೆ.
ಆದರೆ, ಪ್ರಸ್ತುತ ಸುಪ್ರೀಂ ಕೋರ್ಟ್ ನೀಡಿರುವ ಜಾಮೀನು ಆದೇಶವು ಅವರ ಮೇಲ್ಮನವಿಗಳ ಅಂತಿಮ ತೀರ್ಪಲ್ಲ. ಅಪರಾಧ ಸಾಬೀತುಪಡಿಸಿದ ಹಿಂದಿನ ತೀರ್ಪುಗಳ ವಿರುದ್ಧದ ಮೇಲ್ಮನವಿಗಳ ವಿಚಾರಣೆ ಇನ್ನೂ ಬಾಕಿಯಿದೆ.




