ಬಂಟ್ವಾಳ: ಕೀಟನಾಶಕಗಳ ಸುರಕ್ಷಿತ ಬಳಕೆ, ರಸಗೊಬ್ಬರ ಮಾರಾಟ ನಿಯಮಗಳು ಹಾಗೂ ನೂತನ ಕೃಷಿ ಯೋಜನೆಗಳ ಕುರಿತು ರೈತರಿಗೆ ಅರಿವು ಮೂಡಿಸುವ ತಾಲೂಕು ಮಟ್ಟದ ತರಬೇತಿ ಕಾರ್ಯಾಗಾರವು ಬಿ.ಸಿ.ರೋಡಿನ ಎಸ್.ಜಿ.ಎಸ್.ವೈ. ಸಭಾಂಗಣದಲ್ಲಿ ನಡೆಯಿತು.
ಪಿ.ಎಂ.ಆರ್.ಕೆ.ವೈ. ಯೋಜನೆಯಡಿ ಆಯೋಜಿಸಲಾದ ಕಾರ್ಯಾಗಾರದಲ್ಲಿ ಕೃಷಿ ಪರಿಕರ ಮಾರಾಟಗಾರರು, ಕೃಷಿ ಸಖಿಯರು ಹಾಗೂ ರೈತರು ಭಾಗವಹಿಸಿದ್ದರು. ಕೀಟನಾಶಕಗಳ ವಿವೇಚನಾಯುಕ್ತ ಬಳಕೆ, ಮೊಬೈಲ್ ಆ್ಯಪ್, ಮುಖ್ಯಮಂತ್ರಿ ನೇಗಿಲು ಯೋಗಿ ಯೋಜನೆ ಹಾಗೂ ವೈಜ್ಞಾನಿಕ ಕೃಷಿ ಪದ್ಧತಿಗಳ ಕುರಿತು ತಜ್ಞರು ಮಾಹಿತಿ ನೀಡಿದರು.
ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಕೃಷಿ ನಿರ್ದೇಶಕಿ ವೀಣಾ ಕೆ.ಆರ್., ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಜೋ. ಪ್ರದೀಪ್ ಡಿ.ಸೋಜ, ಕೃಷಿ ಅಧಿಕಾರಿ ನಂದನ್ ಶೆಣೈ ಸೇರಿದಂತೆ ಕೃಷಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.



