ಬಂಟ್ವಾಳ: ಪಾಣೆಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿಯ ಸರ್ವಿಸ್ ರಸ್ತೆಯಿಂದ ನರಿಕೊಂಬು–ಶಂಭೂರು ಗ್ರಾಮಗಳನ್ನು ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ಮಾಜಿ ಸಚಿವ ಬಿ.ರಮಾನಾಥ ರೈ ಅವರಿಗೆ ದೂರು ನೀಡಿದ್ದಾರೆ.
ಪಾಣೆಮಂಗಳೂರು ಸರ್ವಿಸ್ ರಸ್ತೆ ಬಳಿ ನಡೆಯುತ್ತಿರುವ ಸಂಪರ್ಕ ರಸ್ತೆ ಕಾಮಗಾರಿಯನ್ನು ಬುಧವಾರ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆಡಿಪಿ ಮಾಜಿ ಸದಸ್ಯ ಉಮೇಶ್ ಬೋಳಂತೂರು, ಪಾಣೆಮಂಗಳೂರಿನಿಂದ ನರಿಕೊಂಬು–ಶಂಭೂರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಮುಚ್ಚಿ ಜೆಸಿಬಿ ಮೂಲಕ ಅಗೆದು ಹಾಕಿರುವುದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ ಎಂದು ತಿಳಿಸಿದರು.
ರಸ್ತೆಯ ಇಳಿಜಾರು ಭಾಗ ತೀರಾ ಕಿರಿದಾಗಿದ್ದು, ಎತ್ತರವನ್ನು ಕಡಿಮೆ ಮಾಡಿ ರಸ್ತೆ ವಿಸ್ತರಣೆ ಮಾಡಬೇಕು. ಪ್ರತಿದಿನ ನೂರಾರು ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಸದ್ಯ ವಾಹನ ಸವಾರರು ಪರ್ಯಾಯವಾಗಿ ಬಳಸುತ್ತಿರುವ ಜೈನ ಬಸದಿಯಿಂದ ಅಂಡರ್ಪಾಸ್ ಮೂಲಕ ನರಿಕೊಂಬು ಸರ್ಕಾರಿ ಪ್ರಾಥಮಿಕ ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ಸಂಪೂರ್ಣ ಹದಗೆಟ್ಟಿದೆ. ಆದ್ದರಿಂದ ಪರ್ಯಾಯ ರಸ್ತೆಯನ್ನು ತಕ್ಷಣ ದುರಸ್ತಿಗೊಳಿಸಿ ವಾಹನಗಳ ದ್ವಿಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು ಎಂದು ರೈ ಅವರು ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚಿಸಿದರು.
ಅಲ್ಲದೆ, ಕಾಮಗಾರಿಯ ಗುಣಮಟ್ಟ ಹಾಗೂ ಪ್ರಗತಿಯ ಬಗ್ಗೆ ನಿಗಾ ವಹಿಸುವಂತೆ ಬಂಟ್ವಾಳ ತಹಸೀಲ್ದಾರ್ ಜಿ. ಮಂಜುನಾಥ್ ಮತ್ತು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಕುಮಾರ್ ಅವರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಎಸ್. ಗಟ್ಟಿ, ಚಿತ್ತರಂಜನ್ ಶೆಟ್ಟಿ ಬೊಂಡಾಲ, ಆಲ್ಬರ್ಟ್ ಮೆನೆಜಸ್, ಕೃಷ್ಣಪ್ಪ ಪೂಜಾರಿ, ರವೀಂದ್ರ ಸಪಲ್ಯ, ಪ್ರಸಾದ್ ಗಾಣಿಗ, ನಿತ್ಯಾನಂದ ಕುರ್ಚಿಪಲ್ಲ, ಉಮೇಶ್ ನೆಲ್ಲಿಗುಡ್ಡೆ, ನರಸಪ್ಪ ಅಮೀನ್, ಶೈಲೇಶ್ ಪೂಜಾರಿ, ಲೋಕೇಶ್, ಮೋನಪ್ಪ ನಿನ್ನಿಪಡ್ಪು, ಸತೀಶ್ ಶೇಡಿಗುರಿ ಮತ್ತಿತರರು ಉಪಸ್ಥಿತರಿದ್ದರು.




