ಬೆಳ್ತಂಗಡಿ: ಸುರಕ್ಷಿತ ಬಾಲ್ಯ ಅಭಿಯಾನದ ಅಂಗವಾಗಿ ಪೋಕ್ಸೊ ಕಾಯ್ದೆಯ ಕುರಿತು ಕಾನೂನು ಅರಿವು ಮೂಡಿಸುವ ಉದ್ದೇಶದಿಂದ ಬೆಳ್ತಂಗಡಿ ತಾಲೂಕಿನ ಮುಗುಳಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ (ಬಿಸಿಎಂ) ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆಹಾರ, ಸ್ವಚ್ಛತೆ ಹಾಗೂ ಮೂಲಭೂತ ಸೌಲಭ್ಯಗಳ ನಿರ್ವಹಣೆಯಲ್ಲಿ ಗಂಭೀರ ಲೋಪಗಳು ಬೆಳಕಿಗೆ ಬಂದಿವೆ.
ಬೆಳ್ತಂಗಡಿಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್ಸಿ ರಾಮಲಿಂಗಪ್ಪ ಅವರು ಮಹಿಳಾ ಪ್ಯಾನಲ್ ವಕೀಲರು, ನ್ಯಾಯಾಲಯದ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿಯೊಂದಿಗೆ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿನಿಯರಿಗೆ ಪೋಕ್ಸೊ ಕಾಯ್ದೆ ಮತ್ತು ಮಕ್ಕಳ ಸುರಕ್ಷತೆಯ ಕುರಿತು ಮಾಹಿತಿ ನೀಡಿದರು. ಬಳಿಕ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿ ಅವರ ಕುಂದುಕೊರತೆಗಳನ್ನು ಆಲಿಸಿದರು.
ವಿದ್ಯಾರ್ಥಿನಿಲಯದ ದಾಖಲಾತಿ ಪಟ್ಟಿಯಲ್ಲಿ 93 ವಿದ್ಯಾರ್ಥಿನಿಯರ ಹೆಸರುಗಳಿದ್ದರೂ, ಭೇಟಿ ಸಂದರ್ಭದಲ್ಲಿ 50ಕ್ಕಿಂತ ಕಡಿಮೆ ವಿದ್ಯಾರ್ಥಿನಿಯರು ಮಾತ್ರ ಹಾಜರಿದ್ದರು ಎಂಬುದು ಗಮನಕ್ಕೆ ಬಂದಿದೆ.
ನಿಗದಿತ ಆಹಾರಪಟ್ಟಿಯಂತೆ ಊಟ ನೀಡುತ್ತಿಲ್ಲ. ಬೆಳಗಿನ ಉಪಾಹಾರ ಕಳಪೆಯಾಗಿದ್ದು, ಸಾಂಬಾರಿನಲ್ಲಿ ಅಗತ್ಯ ಪ್ರಮಾಣದ ಬೇಳೆ ಹಾಗೂ ತರಕಾರಿಗಳಿರುವುದಿಲ್ಲ ಎಂದು ವಿದ್ಯಾರ್ಥಿನಿಯರು ದೂರಿದ್ದಾರೆ. ವಿದ್ಯಾರ್ಥಿನಿಯರ ದೂರಿನ ಹಿನ್ನೆಲೆಯಲ್ಲಿ ನ್ಯಾಯಾಂಗ ಅಧಿಕಾರಿ ಹಾಗೂ ಅವರೊಂದಿಗೆ ಬಂದಿದ್ದ ತಂಡವು ನಿಲಯದಲ್ಲಿ ತಯಾರಿಸಲಾಗಿದ್ದ ರಾತ್ರಿ ಊಟವನ್ನು ಸ್ವತಃ ಸೇವಿಸಿ ಪರಿಶೀಲಿಸಿತು. ಈ ವೇಳೆ ಕೇವಲ ಅನ್ನ ಮತ್ತು ಅತ್ಯಂತ ತೆಳುವಾದ, ಸಮರ್ಪಕ ರುಚಿ ಹಾಗೂ ಗುಣಮಟ್ಟವಿಲ್ಲದ ಸಾಂಬಾರು ನೀಡಿರುವುದು ಕಂಡುಬಂದಿದೆ. ಮಾಂಸಾಹಾರ ವಿತರಣೆಯಲ್ಲಿಯೂ ಅಕ್ರಮ ನಡೆಯುತ್ತಿದೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಪ್ರತಿಯೊಬ್ಬರಿಗೂ ಕೇವಲ ಒಂದು ಬೌಲ್ ಕೋಳಿ ಮಾಂಸ ನೀಡಿ, ಉಳಿದ ಮಾಂಸವನ್ನು ಬೇರೆಡೆಗೆ ಸಾಗಿಸಲಾಗುತ್ತಿದೆ ಎಂದು ದೂರಿದ್ದಾರೆ. ಈ ಆರೋಪಗಳ ಕುರಿತು ಸ್ವತಂತ್ರ ಪರಿಶೀಲನೆ ಅಗತ್ಯವಾಗಿದೆ.
ಇದಲ್ಲದೆ, ಶೌಚಾಲಯ ಹಾಗೂ ಸ್ನಾನಗೃಹಗಳು ಅಶುದ್ಧವಾಗಿದ್ದು, ದುರ್ವಾಸನೆ ಬರುತ್ತಿರುವುದು ಕಂಡುಬಂದಿದೆ. ವಿದ್ಯಾರ್ಥಿನಿಯರಿಂದಲೇ ಶೌಚಾಲಯಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಕಳೆದ ಒಂದು ವರ್ಷದಿಂದ ಸ್ಯಾನಿಟರಿ ಪ್ಯಾಡ್ಗಳನ್ನು ವಿತರಿಸುತ್ತಿಲ್ಲ ಎಂದು ವಿದ್ಯಾರ್ಥಿನಿಯರು ದೂರಿದ್ದಾರೆ. ವಿದ್ಯಾರ್ಥಿನಿಯರ ವಸತಿನಿಲಯದಲ್ಲಿ ಆಹಾರ ಮತ್ತು ಸ್ವಚ್ಛತೆಯಂತಹ ಮೂಲಭೂತ ಸೌಲಭ್ಯಗಳಲ್ಲಿಯೇ ಇಂತಹ ನಿರ್ಲಕ್ಷ್ಯ ಕಂಡುಬಂದಿರುವುದು ಆತಂಕಕಾರಿ ಸಂಗತಿಯಾಗಿದೆ. ವಿದ್ಯಾರ್ಥಿನಿಯರ ಆರೋಗ್ಯ, ಸುರಕ್ಷತೆ ಹಾಗೂ ಮೂಲಭೂತ ಹಕ್ಕುಗಳನ್ನು ಕಾಪಾಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗಿದೆ.




