ಹಾಸನ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜನೋಪಯೋಗಿ ವಸ್ತುಗಳು ಹಾಗೂ ಸೇವೆಗಳ ದರ ನಿರಂತರವಾಗಿ ಏರಿಕೆಯಾಗುತ್ತಿದ್ದು, ಜನಸಾಮಾನ್ಯರ ಬದುಕು ದುಸ್ತರವಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಾಸನದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ವಿದ್ಯುತ್ ದರ ಏರಿಕೆ ಮಾಡಲಾಯಿತು. ಬಳಿಕ ಬಸ್ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಿಸಲಾಗಿದೆ. 2023ರಿಂದ ಹಾಲಿನ ದರವನ್ನು ನಿರಂತರವಾಗಿ ಹೆಚ್ಚಿಸಲಾಗಿದ್ದು, 2024, 2025 ಹಾಗೂ 2026ರಲ್ಲಿಯೂ ದರ ಏರಿಕೆ ಮಾಡಲಾಗಿದೆ. ಮದ್ಯದ ದರ ಹೆಚ್ಚಳದ ಜೊತೆಗೆ ಬೆಂಗಳೂರಿನಲ್ಲಿ ಮೆಟ್ರೋ ಪ್ರಯಾಣ ದರವನ್ನೂ ಏರಿಸಲಾಗಿದೆ. ಹೀಗೆ ಜನಸಾಮಾನ್ಯರಿಗೆ ಅಗತ್ಯವಿರುವ ಸೇವೆ ಹಾಗೂ ವಸ್ತುಗಳ ಬೆಲೆ ಹೆಚ್ಚಿಸುವ ಮೂಲಕ ಸರ್ಕಾರ ಜನರ ಮೇಲೆ ಹೊರೆ ಹೇರುತ್ತಿದೆ ಎಂದು ಟೀಕಿಸಿದರು.
ಸಾಮಾನ್ಯ ಜನರು ಪಡೆಯುವ ಅಲ್ಪ ಸಂಬಳದಲ್ಲಿ ಪ್ರತಿಬಾರಿಯೂ ಬೆಲೆ ಏರಿಕೆಯ ಹೊರೆ ಭರಿಸುವುದು ಕಷ್ಟ. ಜನರ ಆದಾಯ ಹೆಚ್ಚಾಗದಿದ್ದರೂ ಸರ್ಕಾರ ಮಾತ್ರ ನಿರಂತರವಾಗಿ ದರ ಏರಿಕೆ ಮಾಡುತ್ತಿದೆ. ಇದರಿಂದ ಜನಸಾಮಾನ್ಯರ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ ಎಂದರು.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ನೀಡಿರುವುದಾಗಿ ಹೇಳುವ ಸರ್ಕಾರದಲ್ಲಿ ಬಸ್ಗಳ ನಿರ್ವಹಣೆಗೂ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಡೀಸೆಲ್ ಖರೀದಿಸಲು ಹಣವಿಲ್ಲ, ಬಸ್ಗಳ ದುರಸ್ತಿಗೂ ಅನುದಾನವಿಲ್ಲ ಎಂಬ ಸ್ಥಿತಿ ಇದೆ. ಇಂತಹ ಆಡಳಿತದಿಂದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯೇ ಸಂಕಷ್ಟಕ್ಕೆ ಸಿಲುಕುತ್ತಿದೆ ಎಂದು ಆರೋಪಿಸಿದರು.
ಜನಸಾಮಾನ್ಯರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಬೇಕು. ಯಾವುದೇ ಕಾರಣಕ್ಕೂ ಬಸ್ ಪ್ರಯಾಣ ದರವನ್ನು ಮತ್ತೆ ಏರಿಕೆ ಮಾಡಬಾರದು. ಈಗಾಗಲೇ ಹೆಚ್ಚಿಸಿರುವ ಹಾಲಿನ ದರವನ್ನು ಇಳಿಸಬೇಕು. ರೈತರಿಗೆ ಹೆಚ್ಚುವರಿ ಹಣ ನೀಡಬೇಕಿದ್ದರೆ ಸರ್ಕಾರ ತನ್ನ ಬೊಕ್ಕಸದಿಂದ ಭರಿಸಬೇಕು ಹೊರತು ಅದರ ಹೊರೆಯನ್ನು ಗ್ರಾಹಕರ ಮೇಲೆ ಹಾಕಬಾರದು ಎಂಬುದು ನಮ್ಮ ಆಗ್ರಹ ಎಂದು ಶೋಭಾ ಕರಂದ್ಲಾಜೆ ಹೇಳಿದರು.



