ಮಂಗಳೂರು: ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮಾತ್ರ 60 ದಿನಗಳ ಸೇನಾ ತರಬೇತಿ ನೀಡಲು ರಾಜ್ಯ ಅಲ್ಪಸಂಖ್ಯಾತರ ನಿರ್ದೇಶನಾಲಯ ಟೆಂಡರ್ ಆಹ್ವಾನಿಸಿರುವುದನ್ನು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತೀವ್ರವಾಗಿ ಖಂಡಿಸಿದ್ದಾರೆ.
ಸೇನಾ ತರಬೇತಿ ಶಿಸ್ತು, ದೇಶಭಕ್ತಿ ಮತ್ತು ರಾಷ್ಟ್ರೀಯ ಕರ್ತವ್ಯಪ್ರಜ್ಞೆ ಬೆಳೆಸುವ ಕಾರ್ಯಕ್ರಮವಾಗಿದ್ದು, ಅದಕ್ಕೆ ಧರ್ಮದ ಆಧಾರದಲ್ಲಿ ಅರ್ಹತೆ ನಿಗದಿಪಡಿಸುವುದು ತಾರತಮ್ಯದ ನೀತಿಯಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಸಾರ್ವಜನಿಕರ ತೆರಿಗೆ ಹಣದಿಂದ ತರಬೇತಿ ನೀಡುವುದಾದರೆ ಎಲ್ಲ ಧರ್ಮಗಳ ಅರ್ಹ ವಿದ್ಯಾರ್ಥಿಗಳಿಗೂ ಸಮಾನ ಅವಕಾಶ ಕಲ್ಪಿಸಬೇಕು. ನಿರ್ದಿಷ್ಟ ಸಮುದಾಯಕ್ಕೆ ತರಬೇತಿ ನೀಡುವ ಉದ್ದೇಶವಿದ್ದರೆ ಇತರ ಸಮುದಾಯಗಳ ಯುವಕರಿಗೂ ಇದೇ ರೀತಿಯ ಅವಕಾಶ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಯೋಜನೆಯ ಟೆಂಡರ್ ವಿವರ, ವೆಚ್ಚ, ಅರ್ಹತಾ ಮಾನದಂಡ ಹಾಗೂ ಸಾರ್ವಜನಿಕ ಹಣದ ಬಳಕೆಯ ಕುರಿತು ರಾಜ್ಯ ಸರ್ಕಾರ ತಕ್ಷಣ ಸ್ಪಷ್ಟನೆ ನೀಡಬೇಕು. ದೇಶದ ಭದ್ರತೆ ಮತ್ತು ಸೇನಾ ಸೇವೆಯಂತಹ ವಿಚಾರಗಳಲ್ಲಿ ಧಾರ್ಮಿಕ ತಾರತಮ್ಯಕ್ಕೆ ಅವಕಾಶ ನೀಡಬಾರದು ಎಂದು ಕ್ಯಾ. ಬ್ರಿಜೇಶ್ ಚೌಟ ಒತ್ತಾಯಿಸಿದ್ದಾರೆ.


