ಕಾಸರಗೋಡು: ಕೇರಳ ರಾಜ್ಯ ಕನ್ನಡ ಭಾಷಾ ಅಲ್ಪಸಂಖ್ಯಾತರ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಂಘಟನೆಯಾದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕಾಸರಗೋಡು ಇದರ 36ನೇ ಸಂಸ್ಥಾಪನಾ ವರ್ಷಾಚರಣೆಯು ನವೆಂಬರ್ 4ರ ಬುಧವಾರ ಸಂಜೆ 6 ಗಂಟೆಗೆ ಕಾಸರಗೋಡು ಕನ್ನಡ ಗ್ರಾಮದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಖ್ಯಾತ ಗಾಯಕರಿಂದ ಭಾವಗೀತೆ, ಜಾನಪದ ಗೀತೆ ಹಾಗೂ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅವರ 61ನೇ ಜನ್ಮದಿನಾಚರಣೆ ಹಾಗೂ 61ನೇ ಕನ್ನಡ ಯಾತ್ರೆಯನ್ನು ಆಚರಿಸಲಾಗುವುದು.
ಕಾಸರಗೋಡು ಕನ್ನಡ ಗ್ರಾಮದಲ್ಲಿ ನವೆಂಬರ್ 28 ಮತ್ತು 29ರಂದು ನಡೆಯಲಿರುವ ಕೇರಳ ರಾಜ್ಯ 8ನೇ ಕನ್ನಡ ಸಮ್ಮೇಳನ-2026, ಕೇರಳ-ಕರ್ನಾಟಕ ಉತ್ಸವ ಹಾಗೂ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಉತ್ಸವದ ಯಶಸ್ವಿ ಸಂಘಟನೆ ಕುರಿತು ಈ ಸಂದರ್ಭದಲ್ಲಿ ಸಮಾಲೋಚನಾ ಸಭೆ ನಡೆಯಲಿದೆ.
ಸಭೆಯಲ್ಲಿ ಕಾಸರಗೋಡು ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಅಭಿಮಾನಿಗಳು ಭಾಗವಹಿಸಿ ಕಾರ್ಯಕ್ರಮಗಳ ರೂಪುರೇಷೆ ಮತ್ತು ಸಂಘಟನೆಯ ಕುರಿತು ಚರ್ಚಿಸಲಿದ್ದಾರೆ.



