ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಶೀಘ್ರದಲ್ಲೇ ₹10 ಮತ್ತು ₹20 ಮುಖಬೆಲೆಯ ಹೊಸ ಮಾದರಿಯ ಪಾಲಿಮರ್ (ಪ್ಲಾಸ್ಟಿಕ್) ನೋಟುಗಳನ್ನು ಮಾರುಕಟ್ಟೆಗೆ ತರಲು ಸಿದ್ಧತೆ ನಡೆಸುತ್ತಿದೆ. ಮುಂದಿನ ಏಪ್ರಿಲ್ 1ರಿಂದ ಪ್ರಾಯೋಗಿಕವಾಗಿ ಈ ನೋಟುಗಳನ್ನು ಜಾರಿಗೆ ತರಲು ಯೋಜನೆ ರೂಪಿಸಲಾಗಿದೆ.
ಪ್ರಸ್ತುತ ಚಲಾವಣೆಯಲ್ಲಿರುವ ₹10 ಮತ್ತು ₹20 ಕಾಗದದ ನೋಟುಗಳ ಗಾತ್ರ ಹಾಗೂ ಅಳತೆಯನ್ನೇ ಹೊಸ ಪ್ಲಾಸ್ಟಿಕ್ ನೋಟುಗಳಲ್ಲೂ ಕಾಯ್ದುಕೊಳ್ಳಲಾಗುತ್ತದೆ. ಇದರಿಂದಾಗಿ ಬ್ಯಾಂಕುಗಳು ತಮ್ಮ ಎಟಿಎಂ (ATM) ಯಂತ್ರಗಳನ್ನು ಮರುವಿನ್ಯಾಸಗೊಳಿಸುವ ಹೆಚ್ಚುವರಿ ವೆಚ್ಚ ತಪ್ಪಲಿದೆ. ಈ ಪ್ರಯೋಗದ ಯಶಸ್ಸನ್ನು ಆಧರಿಸಿ, ಮುಂದಿನ ದಿನಗಳಲ್ಲಿ ಇತರ ಮೌಲ್ಯದ ನೋಟುಗಳನ್ನೂ ಇದೇ ಮಾದರಿಯಲ್ಲಿ ಜಾರಿಗೊಳಿಸುವ ಸಾಧ್ಯತೆಯಿದೆ.
ಹಳೆಯ ನೋಟುಗಳು ಬ್ಯಾನ್ ಇಲ್ಲ
ಇದು ಕೇವಲ ಪ್ರಾಯೋಗಿಕ ಪರೀಕ್ಷೆಯಷ್ಟೇ ಆಗಿರುವುದರಿಂದ, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಸಾಮಾನ್ಯ ಕಾಗದದ ನೋಟುಗಳು ಕೂಡ ಎಂದಿನಂತೆ ಚಲಾವಣೆಯಲ್ಲಿರುತ್ತವೆ. ಹಳೆಯ ನೋಟುಗಳನ್ನು ರದ್ದುಗೊಳಿಸುವ ಯಾವುದೇ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
200 ಕೋಟಿ ನೋಟುಗಳ ಮುದ್ರಣ
ಆರ್ಬಿಐ ಈ ಯೋಜನೆಯಡಿ ಒಟ್ಟು 200 ಕೋಟಿ ಪಾಲಿಮರ್ ನೋಟುಗಳನ್ನು ಬಿಡುಗಡೆ ಮಾಡಲು ಉದ್ದೇಶಿಸಿದೆ. ಇದರಲ್ಲಿ ₹10 ಮುಖಬೆಲೆಯ 100 ಕೋಟಿ ಹಾಗೂ ₹20 ಮುಖಬೆಲೆಯ 100 ಕೋಟಿ ನೋಟುಗಳು ಒಳಗೊಂಡಿರಲಿವೆ.



