ಇಂದೋರ್: ಯುವಜನರಲ್ಲಿ ಹೆಚ್ಚುತ್ತಿರುವ ಅಸಮಾಧಾನ, ಸಾಮಾಜಿಕ ಮಾಧ್ಯಮದ ಸವಾಲುಗಳು ಹಾಗೂ ಸಾಂಪ್ರದಾಯಿಕ ಸಂಘಟನಾ ವ್ಯವಸ್ಥೆಗಳಿಂದ ಹೊರಗೆ ರೂಪುಗೊಳ್ಳುತ್ತಿರುವ ಯುವಜನರ ರಾಜಕೀಯ ಚಿಂತನೆ ಮತ್ತು ಚಳವಳಿಗಳ ಕುರಿತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮಹತ್ವದ ಚರ್ಚೆ ನಡೆಸಲು ಸಿದ್ಧವಾಗಿದೆ.
ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಕಾರ್ಯಕಾರಿ ಮಂಡಲ ಬೈಠಕ್ ನವೆಂಬರ್ 2ರಿಂದ 4ರವರೆಗೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ಮೂರು ದಿನಗಳ ಕಾಲ ನಡೆಯಲಿದೆ.
ನಿರುದ್ಯೋಗ, ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಕುರಿತ ಯುವಜನರ ಆತಂಕ ಹಾಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳನ್ನು ವಿದೇಶಿ ಶಕ್ತಿಗಳು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಸೇರಿದಂತೆ ಹಲವು ವಿಷಯಗಳು ಸಭೆಯಲ್ಲಿ ಪ್ರಮುಖವಾಗಿ ಚರ್ಚೆಯಾಗುವ ನಿರೀಕ್ಷೆಯಿದೆ.
ಸಾಮಾಜಿಕ ಮಾಧ್ಯಮ ಮತ್ತು ಹೊಸ ಮಾಧ್ಯಮಗಳ ಪ್ರಭಾವದಿಂದ ಯುವಜನರ ರಾಜಕೀಯ ಭಾಷೆ, ಅಭಿಪ್ರಾಯಗಳು ಹಾಗೂ ಚಳವಳಿಗಳ ಸ್ವರೂಪ ವೇಗವಾಗಿ ಬದಲಾಗುತ್ತಿದೆ. ಸಾಂಪ್ರದಾಯಿಕ ಸಂಘಟನಾ ಚೌಕಟ್ಟಿನ ಹೊರಗಡೆಯೂ ಯುವಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಸಂಘಟಿತರಾಗುತ್ತಿರುವ ಹಿನ್ನೆಲೆಯಲ್ಲಿ, ಈ ಹೊಸ ತಲೆಮಾರಿನೊಂದಿಗೆ ಹೇಗೆ ಪರಿಣಾಮಕಾರಿಯಾಗಿ ಸಂಪರ್ಕ ಸಾಧಿಸಬೇಕು ಎಂಬ ಬಗ್ಗೆಯೂ ಸಂಘ ಪರಿವಾರದಲ್ಲಿ ಚರ್ಚೆಗಳು ನಡೆಯಲಿವೆ.



