ಲಕ್ನೋ: ಉತ್ತರ ಪ್ರದೇಶದ ಮತದಾರರ ಪಟ್ಟಿಯಿಂದ ಸುಮಾರು 1.27 ಕೋಟಿ ಹಿಂದೂ ಮತದಾರರ ಹೆಸರುಗಳು ನಾಪತ್ತೆಯಾಗಿವೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರೋಪಿಸಿದ್ದಾರೆ. ಈ ಕುರಿತು ಬಿಜೆಪಿ ವತಿಯಿಂದ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಗಿದ್ದು, ಅರ್ಹ ಮತದಾರರ ಹೆಸರುಗಳನ್ನು ಮತ್ತೆ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಒತ್ತಾಯಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ನವೆಂಬರ್ 9ರಂದು ಅಯೋಧ್ಯೆಯಲ್ಲಿ ನಡೆದ ‘ಆಜ್ ತಕ್ ಪಂಚಾಯತ್’ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಬಳಿಕ ಉತ್ತರ ಪ್ರದೇಶದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಶೇ.1.65ರಷ್ಟು ಹೆಚ್ಚಾಗಿದೆ. ಆದರೆ ದೊಡ್ಡ ಸಂಖ್ಯೆಯಲ್ಲಿ ಹಿಂದೂ ಮತದಾರರ ಹೆಸರುಗಳು ಚುನಾವಣಾ ಆಯೋಗದ ಪಟ್ಟಿಯಲ್ಲಿ ಕಾಣೆಯಾಗಿವೆ ಎಂದು ಹೇಳಿದ್ದಾರೆ.
1.27 ಕೋಟಿ ಮತದಾರರ ಹೆಸರು ನಾಪತ್ತೆ ಎಂಬ ಆರೋಪ
ಯೋಗಿ ಆದಿತ್ಯನಾಥ್ ಅವರು ನೀಡಿರುವ ವಿವರಗಳ ಪ್ರಕಾರ, ಪಂಚಾಯತ್ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಹೆಸರುಗಳಿದ್ದರೂ ಚುನಾವಣಾ ಆಯೋಗದ ಪಟ್ಟಿಯಲ್ಲಿ ಕಾಣೆಯಾಗಿರುವವರ ಸಂಖ್ಯೆ ಸುಮಾರು 66 ಲಕ್ಷ. ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಪ್ರಯೋಜನ ಪಡೆಯುತ್ತಿರುವ ಸುಮಾರು 55 ಲಕ್ಷ ಹಿಂದೂಗಳ ಹೆಸರುಗಳು ಮತದಾರರ ಪಟ್ಟಿಯಲ್ಲಿ ಇಲ್ಲ. ಅಲ್ಲದೆ, 18ರಿಂದ 19 ವರ್ಷದೊಳಗಿನ ಸುಮಾರು 4.5 ಲಕ್ಷ ಯುವ ಮತದಾರರ ಹೆಸರುಗಳೂ ಕಾಣೆಯಾಗಿವೆ ಎಂದು ಅವರು ಆರೋಪಿಸಿದ್ದಾರೆ.
ಈ ಎಲ್ಲ ಅಂಶಗಳನ್ನು ಉಲ್ಲೇಖಿಸಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಗಿದೆ. ಅರ್ಹ ಮತದಾರರನ್ನು ಪಟ್ಟಿಗೆ ಮರುಸೇರ್ಪಡೆಗೊಳಿಸಬೇಕು ಎಂದು ಯೋಗಿ ಒತ್ತಾಯಿಸಿದ್ದಾರೆ.
ಅಖಿಲೇಶ್ ಯಾದವ್ಗೆ ಸವಾಲು
SIR ಪ್ರಕ್ರಿಯೆ ವಿರುದ್ಧ ವಿರೋಧ ಪಕ್ಷಗಳು ನಡೆಸುತ್ತಿರುವ ಅಭಿಯಾನವನ್ನು ಯೋಗಿ ಟೀಕಿಸಿದ್ದಾರೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಗೆ SIR ಪ್ರಕ್ರಿಯೆಯನ್ನು ಹಿಂಪಡೆಯುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸುವ ಧೈರ್ಯವಿದೆಯೇ ಎಂದು ಪ್ರಶ್ನಿಸಿದ್ದಾರೆ.
SIR ಬಳಿಕ ಮತದಾರರ ಸಂಖ್ಯೆಯಲ್ಲಿ ಇಳಿಕೆ
ಉತ್ತರ ಪ್ರದೇಶದಲ್ಲಿ 2025ರ ಅಕ್ಟೋಬರ್ 27ರಂದು ಆರಂಭವಾದ SIR ಪ್ರಕ್ರಿಯೆ 2026ರ ಏಪ್ರಿಲ್ 10ರಂದು ಪೂರ್ಣಗೊಂಡಿತ್ತು. ಪರಿಷ್ಕರಣೆಗೆ ಮುನ್ನ ರಾಜ್ಯದಲ್ಲಿ 15.44 ಕೋಟಿ ಮತದಾರರಿದ್ದು, ಅಂತಿಮ ಪಟ್ಟಿಯಲ್ಲಿ ಈ ಸಂಖ್ಯೆ 13.39 ಕೋಟಿಗೆ ಇಳಿಕೆಯಾಗಿದೆ. ಪರಿಷ್ಕರಣೆ ವೇಳೆ ಒಟ್ಟಾರೆ ಸುಮಾರು 2.04 ಕೋಟಿ ಹೆಸರುಗಳು ಕಡಿತಗೊಂಡಿದ್ದವು.
ಇದೇ ವೇಳೆ, ಪಂಚಾಯತ್ ಮತದಾರರ ಪಟ್ಟಿ ಹಾಗೂ ವಿಧಾನಸಭಾ ಮತದಾರರ ಪಟ್ಟಿಯ ನಡುವೆ ಸುಮಾರು 2.4 ಕೋಟಿ ಮತದಾರರ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ, ಎರಡೂ ಪಟ್ಟಿಗಳನ್ನು ಪರಿಶೀಲಿಸುವಂತೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿ ಸೂಚಿಸಿದ್ದಾರೆ. ಈ ವಿವಾದದ ಕುರಿತು ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿ ನವದೀಪ್ ರಿಂವಾ ಅವರು ನವೆಂಬರ್ 17ರಂದು ಮಾಹಿತಿ ನೀಡಲಿದ್ದಾರೆ ಎಂದು ವರದಿಯಾಗಿದೆ.




