ಮಂಗಳೂರು: ಇಬ್ಬರು ವ್ಯಕ್ತಿಗಳ ಮೇಲೆ ಬೊಲೇರೋ ವಾಹನ ಹತ್ತಿಸಿ ಕೊಲೆ ಮಾಡಲು ಯತ್ನಿಸಿದ ಆರೋಪದ ಮೇಲೆ ಜಗದೀಶ್ ಜೈನ್ ಅಲಿಯಾಸ್ ಜಗ್ಗು ಎಂಬಾತನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕಿನ ಮಾಣಿ ನಿವಾಸಿ ವಿಕೇಶ್ ಕೆ. (32) ಅವರು ಮಾಣಿ ಜಂಕ್ಷನ್ನ ಮೈದಾನದಲ್ಲಿರುವ ಪಟಾಕಿ ಅಂಗಡಿ ಬಳಿ ನಿಂತಿದ್ದಾಗ, ಆರೋಪಿ ಜಗದೀಶ್ ಜೈನ್ ಅತಿವೇಗವಾಗಿ ಬೊಲೇರೋ ವಾಹನ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆಯಲು ಯತ್ನಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ವಿಕೇಶ್ ವಾಹನದ ಬಾನೆಟ್ ಮೇಲೆ ಹಾರಿ ಮಣ್ಣಿನ ಮೇಲೆ ಬಿದ್ದು ಅಪಾಯದಿಂದ ಪಾರಾಗಿದ್ದು, ಎಡಕಾಲಿನ ಮೊಣಕಾಲಿಗೆ ಗಾಯವಾಗಿದೆ.
ಅಲ್ಲಿದ್ದ ವಿಕೇಶ್ ಅವರ ಸಂಬಂಧಿ ತೀರ್ಥಪ್ರಸಾದ್ ಅವರ ಮೇಲೂ ವಾಹನ ಹತ್ತಿಸಲು ಆರೋಪಿ ಯತ್ನಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಳಿಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಕರಣವು ಬಿಎನ್ಎಸ್ನ ವಿವಿಧ ಕಲಂಗಳಡಿ ದಾಖಲಾಗಿದೆ.



