ಸುಬ್ರಹ್ಮಣ್ಯ : ವೈಯಕ್ತಿಕ ಕಾರಣಗಳಿಂದ ಮನನೊಂದು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಉಡುಪಿ ಮೂಲದ ಮಹಿಳೆಯೊಬ್ಬರನ್ನು ಮೊಸಳೆಯ ಕಡಿತದ ನಡುವೆಯೂ ಪೊಲೀಸರು ಮತ್ತು ಸ್ಥಳೀಯರು ಸುರಕ್ಷಿತವಾಗಿ ರಕ್ಷಿಸಿದ ಘಟನೆ ಸುಬ್ರಹ್ಮಣ್ಯದ ಕುಮಾರಧಾರಾ ಸೇತುವೆ ಬಳಿ ನಡೆದಿದೆ.
ನವೆಂಬರ್ 4ರಂದು ರಾತ್ರಿ ಉಡುಪಿಯಿಂದ ಸುಬ್ರಹ್ಮಣ್ಯಕ್ಕೆ ಬಂದಿದ್ದ ಮಹಿಳೆ, ಕುಮಾರಧಾರಾ ಸೇತುವೆ ಸಮೀಪ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವೇಳೆ ನದಿಯಲ್ಲಿದ್ದ ಮೊಸಳೆಯೊಂದು ಮಹಿಳೆಗೆ ಕಚ್ಚಿದ್ದು, ಸಣ್ಣಪುಟ್ಟ ಗಾಯಗಳಾಗಿವೆ.
ಮೊಸಳೆಯ ಕಡಿತದಿಂದ ನೋವು ಹಾಗೂ ಆಘಾತಕ್ಕೊಳಗಾದ ಮಹಿಳೆ ಜೋರಾಗಿ ಕಿರುಚಿಕೊಂಡಿದ್ದಾರೆ. ಅವರ ಕೂಗಾಟ ಕೇಳಿದ ಸಮೀಪದ ಲಾಡ್ಜ್ನ ಸಿಬ್ಬಂದಿ ತಕ್ಷಣ ಎಚ್ಚೆತ್ತುಕೊಂಡು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ಸುರಕ್ಷಿತವಾಗಿ ನದಿಯಿಂದ ದಡಕ್ಕೆ ಕರೆತಂದಿದ್ದಾರೆ. ಬಳಿಕ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆ ಹಾಗೂ ಆರೈಕೆಯ ವ್ಯವಸ್ಥೆ ಕೈಗೊಂಡು ಮನೆಯವರೊಂದಿಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿದುಬಂದಿದೆ.
ಸಮಯಕ್ಕೆ ಸರಿಯಾಗಿ ಸ್ಥಳೀಯರು ಹಾಗೂ ಪೊಲೀಸರು ಸ್ಪಂದಿಸಿದ್ದರಿಂದ ಮಹಿಳೆಯ ಜೀವ ಉಳಿದಿದೆ. ಘಟನೆ ಸುಬ್ರಹ್ಮಣ್ಯ ಪರಿಸರದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.




