ಮಂಗಳೂರು: ವ್ಯಂಗ್ಯ, ವಿಡಂಬನೆ ಹಾಗೂ ಹಾಸ್ಯದ ಮೂಲಕ ಸಾಮಾಜಿಕ ಕಳಕಳಿಯನ್ನು ಅಭಿವ್ಯಕ್ತಿಸುವ ‘ಹನಿ ಸಂಹಿತೆ’ ಕೃತಿ ನಗರದ ನಂತೂರಿನ ಶ್ರೀ ಭಾರತೀ ಕಾಲೇಜು ಸಭಾಂಗಣದಲ್ಲಿ ಬಿಡುಗಡೆಗೊಂಡಿತು.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಂಗಳೂರು ತಾಲೂಕು ಘಟಕ, ನೆಲ್ಲಿಕಾರು ಜಿನದತ್ತ ಶೆಟ್ಟಿ ವಸಂತಮ್ಮ ಪ್ರತಿಷ್ಠಾನ ಹಾಗೂ ಮಂಗಳೂರು ಹವ್ಯಕ ಸಭಾ (ರಿ.) ಇದರ ಜಂಟಿ ಆಶ್ರಯದಲ್ಲಿ ಪರಿಷತ್ತಿನ ಗೌರವ ಕಾರ್ಯದರ್ಶಿ ಗಣೇಶ್ ಪ್ರಸಾದ್ ಜೀ (ಜೀಜೀ) ಅವರ ಹತ್ತನೇ ಕೃತಿಯನ್ನು ಖ್ಯಾತ ಹನಿಗವಿ ಡುಂಡಿರಾಜ್ ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಡುಂಡಿರಾಜ್ ಅವರು ಕೃತಿಯಲ್ಲಿನ ಹಲವು ಹನಿಗವನಗಳನ್ನು ವಿಶ್ಲೇಷಿಸಿ, ಅವುಗಳಲ್ಲಿರುವ ವ್ಯಂಗ್ಯ ಮತ್ತು ಸಾಮಾಜಿಕ ಸಂದೇಶಗಳನ್ನು ವಿವರಿಸಿದರು. ಶಿಕ್ಷಣ ವ್ಯವಸ್ಥೆಯಲ್ಲಿನ ವ್ಯಾಪಾರೀಕರಣ, ಬದುಕಿನ ವಾಸ್ತವಗಳು ಹಾಗೂ ಆಡಳಿತ ವ್ಯವಸ್ಥೆಯ ವೈರುಧ್ಯಗಳನ್ನು ಹಾಸ್ಯಮಯವಾಗಿ ಬಿಂಬಿಸುವ ಕವಿತೆಗಳನ್ನು ಉಲ್ಲೇಖಿಸಿದರು.
ಅರ್ಥಪೂರ್ಣ ವ್ಯಂಗ್ಯ, ವಿಡಂಬನೆ, ಹಾಸ್ಯ ಹಾಗೂ ಸಾಮಾಜಿಕ ಕಳಕಳಿಯನ್ನು ಒಳಗೊಂಡಿರುವ ‘ಹನಿ ಸಂಹಿತೆ’ ಮತ್ತೆ ಮತ್ತೆ ಓದಬೇಕೆನಿಸುವ ಕೃತಿಯಾಗಿದೆ. ಜೀಜೀ ಅವರ ಸಾಹಿತ್ಯಿಕ ಪ್ರಯತ್ನ ಅಭಿನಂದನೀಯ. ‘ಜೀಯೋ ಔರ್ ಜೀನೇ ದೋ’ ಎಂಬ ಸಿದ್ಧಾಂತದ ಮೊದಲ ಅಕ್ಷರಗಳನ್ನು ಸೇರಿಸಿ ಅವರು ‘ಜೀಜೀ’ ಎಂಬ ಕಾವ್ಯನಾಮವನ್ನು ಇಟ್ಟುಕೊಂಡಿರುವಂತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಂಜುನಾಥ್ ಎಸ್. ರೇವಣಕರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಗಳೂರು ಹವ್ಯಕ ಸಭಾದ ಅಧ್ಯಕ್ಷ ದಿವಾಣ ಗೋವಿಂದ ಭಟ್ ಹಾಗೂ ನೆಲ್ಲಿಕಾರು ಜಿನದತ್ತ ಶೆಟ್ಟಿ ವಸಂತಮ್ಮ ಪ್ರತಿಷ್ಠಾನದ ಅಧ್ಯಕ್ಷ, ಸೂರಾಲು ಅರಮನೆಯ ಮುಖ್ಯಸ್ಥ ಎನ್. ತಿಲಕ್ ಪ್ರಸಾದ್ ಜೀ ಭಾಗವಹಿಸಿ ಶುಭ ಹಾರೈಸಿದರು.
ಉಷಾ ಜಿ. ಪ್ರಸಾದ್ ಜೀ ಪ್ರಾರ್ಥಿಸಿದರು. ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ಮುರಲೀಮೋಹನ್ ಚೂಂತಾರು ಸ್ವಾಗತಿಸಿದರು. ಖ್ಯಾತ ಬಹುಭಾಷಾ ಕವಿ ರಘು ಇಡ್ಕಿದು ಕಾರ್ಯಕ್ರಮ ನಿರೂಪಿಸಿದರು. ಗೌರವ ಕೋಶಾಧಿಕಾರಿ ಸುಬ್ರಾಯ ಭಟ್ ವಂದಿಸಿದರು. ಸನತ್ ಕುಮಾರ್ ಜೈನ್ ಮತ್ತು ಕೃಷ್ಣಪ್ಪ ನಾಯ್ಕ್ ಸಹಕರಿಸಿದರು.
Previous Article
ಮಾಯಾ ಟ್ರೇಡರ್ಸ್ ಗ್ರ್ಯಾಂಡ್ ದೀಪಾವಳಿ ಬಂಪರ್ ಕೊಡುಗೆಗೆ ಚಾಲನೆ
ಮಾಯಾ ಟ್ರೇಡರ್ಸ್ ಗ್ರ್ಯಾಂಡ್ ದೀಪಾವಳಿ ಬಂಪರ್ ಕೊಡುಗೆಗೆ ಚಾಲನೆ

