ಹಾಸನ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ವಿಧಾನ ಪರಿಷತ್ ಸದಸ್ಯ ಬೋಜೇಗೌಡ, ಪ್ರಿಯಾಂಕ್ ಖರ್ಗೆ ಅವರು ತಮ್ಮ ನಾಲಿಗೆಗೆ ಲಗಾಮು ಹಾಕಿಕೊಂಡು ಮಾತನಾಡಬೇಕು. ಹಳ್ಳಿಗಾಡಿನ ಜನರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರೆ ಕೂಡಲೇ ಇಡೀ ನಾಡಿನ ಜನತೆಯ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಹಾಸನಾಂಬ ದೇವಿಯ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಟಿಂಗ್ ಆಪರೇಷನ್ ವಿಚಾರವಾಗಿ ಸರ್ಕಾರದ ನಡೆ ಹಾಗೂ ಗೃಹ ಸಚಿವರ ಹೇಳಿಕೆಗಳ ವಿರುದ್ಧ ವಾಗ್ದಾಳಿ ನಡೆಸಿದರು.
“ನಾನೇ ಸ್ಟಿಂಗ್ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ತಾಕತ್ತಿಲ್ಲವೇ? ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ದೂರು ನೀಡಿದ್ದಾರೆ. ಇಂತಹವರೇ ಮಾಡಿದ್ದಾರೆ ಎಂದು ಹೇಳಿದ್ದಾರೆ. ಒಬ್ಬರು ಮಾಧ್ಯಮದವರು, ಮತ್ತೊಬ್ಬರು ಮಹಿಳೆ ಎಂದು ಹೇಳಲಾಗಿದೆ. ಹಾಗಿದ್ದರೂ ಇದುವರೆಗೆ ಏಕೆ ಕ್ರಮ ಕೈಗೊಂಡಿಲ್ಲ? ಇದರ ಹಿಂದೆ ಏನು ಚಿತಾವಣೆ ಇದೆ, ಯಾರನ್ನು ರಕ್ಷಣೆ ಮಾಡುತ್ತಿದ್ದೀರಿ?” ಎಂದು ಪ್ರಶ್ನಿಸಿದರು.
ಪ್ರಿಯಾಂಕ್ ಖರ್ಗೆ ಅವರು ಹಳ್ಳಿಗಾಡಿನ ಜನರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು. ಅವರ ತಂದೆ, ಅಜ್ಜ ಮತ್ತು ಮುತ್ತಜ್ಜ ಎಲ್ಲಿ ಹುಟ್ಟಿದ್ದಾರೆ ಎಂಬುದನ್ನು ಮೊದಲು ತಿಳಿದುಕೊಳ್ಳಲಿ. ಕೃಷಿ ಕುಟುಂಬದಿಂದ ಬಂದವರು ಹಾಗೂ ಗ್ರಾಮೀಣ ಹಿನ್ನೆಲೆಯ ಜನರನ್ನು ಹಗುರವಾಗಿ ಕಾಣಬಾರದು. ಪ್ರಿಯಾಂಕ್ ಖರ್ಗೆ ಅವರು ಕಾನ್ವೆಂಟ್ನಲ್ಲಿ ಓದಿಕೊಂಡು ಬಂದಿರಬಹುದು. ಆದರೆ, ಪಡೆದ ಪದವಿಗೆ ತಕ್ಕಂತೆ ಮಾತನಾಡಬೇಕು ಎಂದು ಟೀಕಿಸಿದರು.
ಹಳ್ಳಿಯಿಂದ ಬಂದವರು ದೇಶದ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಗ್ರಾಮೀಣ ಹಿನ್ನೆಲೆಯ ಎಚ್.ಡಿ. ದೇವೇಗೌಡರು ಪ್ರಧಾನಮಂತ್ರಿಯಾಗಿದ್ದಾರೆ. ಹಳ್ಳಿಯಿಂದ ಬಂದವರೇ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿದ್ದಾರೆ. ಹೀಗಿರುವಾಗ ಗ್ರಾಮೀಣ ಜನರನ್ನು ಅವಹೇಳನ ಮಾಡುವುದು ಸರಿಯಲ್ಲ. ಹಳ್ಳಿಗಳಿಗೆ ಹೋಗಿ ‘ವಿಲೇಜ್ ಈಡಿಯಟ್’ ಎಂದು ಹೇಳಲಿ, ಅಲ್ಲಿನ ಜನರು ಸುಮ್ಮನಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಟಿಂಗ್ ಆಪರೇಷನ್ಗೆ ಕಾಂಗ್ರೆಸ್ನವರೇ ಕಾರಣ ಎಂಬುದನ್ನು ಅವರ ಸಚಿವರೇ ಹೇಳಿದ್ದಾರೆ. ಹಾಗಾದರೆ ಸಂಬಂಧಪಟ್ಟ ಸಚಿವರ ವಿರುದ್ಧ ಕ್ರಮ ಕೈಗೊಳ್ಳಲಿ ಅಥವಾ ಸ್ಟಿಂಗ್ ಮಾಡಿದವರ ವಿರುದ್ಧ ಕ್ರಮ ಜರುಗಿಸಲಿ. ಈ ವಿಚಾರದಲ್ಲಿ ಸರ್ಕಾರ ಸ್ಪಷ್ಟ ನಿಲುವು ತಳೆಯಬೇಕು ಎಂದು ಒತ್ತಾಯಿಸಿದರು.




